ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಲೋಕಾರ್ಪಣೆ, ಪ್ರಯಾಣಿಕರಿಗೆ ಸಂಕ್ರಾಂತಿ ಸಿಹಿ
ಬೆಂಗಳೂರು: ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಗುರುವಾರ ಚಾಲನೆ ದೊರಕಿದ್ದು, ಪರಿಣಾಮ, ಪ್ರತಿನಿತ್ಯ 75 ಸಾವಿರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
6 ಕಿ.ಮೀ ಉದ್ದದ ನೂತನ ಮಾರ್ಗಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ. ಈ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ದಿನದಂದೇ ಸಿಹಿಸುದ್ದಿ ದೊರಕಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಸಿರುನಿಶಾನೆ ತೋರಿದರು. ಮೆಟ್ರೋ ಹಸಿರು ಮಾರ್ಗ ತುಮಕೂರು ರಸ್ತೆ ನಾಗಸಂಧ್ರದಿಂದ ಕನಕಪುರ ರಸ್ತೆಯ ಯಲಚೇನಹಳ್ಳಿವರೆಗೆ ಇತ್ತು.ಈಗ ಈ ಮಾರ್ಗವನ್ನು ಯಲಚೇನಹಳ್ಳಿಯಿಂದ ಅಂಜನಾಪುರಕ್ಕೆ 6 ಕಿ.ಮೀ ನಷ್ಟು ದೂರ ವಿಸ್ತರಿಸಲಾಗಿದೆ. ಕನಕಪುರ ರಸ್ತೆಯಲ್ಲಿ 6 ಕಿ.ಮೀ ದೂರ ವಿಸ್ತರಿಸಲಾಗಿದೆ.
ಮೆಟ್ರೋ ಮಾರ್ಗಗಳು: ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ(ಅಂಜನಾಪುರ). ಈ ಮಾರ್ಗದಲ್ಲಿ ಕಳೆದ ಮೂರು ತಿಂಗಳಿನಿಂದ ಪ್ರಾಯೋಗಿಕ ಸಂಚಾರ ನಡೆಸಿರುವ ಮೆಟ್ರೋ ರೈಲು, ಕಳೆದ ತಿಂಗಳು ರೈಲ್ವೆ ಸುರಕ್ಷತಾ ಕಮೀಷನರ್ ರಿಂದ ವಾಣಿಜ್ಯ ಸಂಚಾರಕ್ಕೆ ಅನುಮತಿ ಪಡೆದಿತ್ತು.
ಈ ಹಿನ್ನೆಲೆಯಲ್ಲಿ ಇಂದು ನೂತನ ರೈಲು ಮಾರ್ಗ ಲೋಕಾರ್ಪಣೆಗೊಂಡಿದೆ.ಈ ಮೆಟ್ರೋ ಮಾರ್ಗದಿಂದಾಗಿ ನಿತ್ಯ 75 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಇದೀಗ ನಗರದ ಸಂಚಾರಿಗಳಿಗೆ ಮತ್ತೊಂದು ಅಂತಹದ್ದೇ ರೀತಿಯ ಸೇವೆ ನೀಡುತ್ತಿರುವ ಸರ್ಕಾರದಿಂದ ಯೆಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ ಟಿಟ್ಯೂಟ್ ಗೆ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೊ ಸಂಚಾರ ಆರಂಭವಾಗಲಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಆರ್ ಆಶೋಕ್ , ಶಾಸಕ ಎಸ್. ಆರ್. ವಿಶ್ವನಾಥ್ ಭಾಗಿಯಾಗಿದ್ದರು.