Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಪಾಕಿಸ್ತಾನ ಮತ್ತು ಚೀನಾ ಭಾರತಕ್ಕೆ ಪ್ರಬಲ ಬೆದರಿಕೆ ದೇಶಗಳಾಗಿವೆ, ಅವುಗಳನ್ನು ಎದುರಿಸಲು ನಾವು ಸಜ್ಜಾಗಬೇಕು: ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ

ನವದೆಹಲಿ: ಉತ್ತರದ ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರದ ಬಗ್ಗೆ ನಿಗಾವಹಿಸಲಾಗುತ್ತಿದೆ. ಚೀನಾದೊಂದಿಗೆ ಗಡಿ ಸಮಸ್ಯೆಗೆ ಶಾಶ್ವತ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ನಾವು ಸಾಧ್ಯವಾದ ಪ್ರಯತ್ನವೆಲ್ಲವನ್ನೂ ಮಾಡುತ್ತಿದ್ದೇವೆ, ಆದರೆ ಯಾವುದೇ ಸಂಭವನೀಯ ಪರಿಸ್ಥಿತಿಗಳನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಸಂಪೂರ್ಣವಾಗಿ ನಮಗೆ ಸವಾಲಿನ ವರ್ಷವಾಗಿತ್ತು. ಆ ಸವಾಲಿನ ಮಧ್ಯೆ ಓಡಾಡುವ ಪರಿಸ್ಥಿತಿ ನಮಗೆ ಉಂಟಾಗಿತ್ತು. ಅಂತಹ ಕಠಿಣ ಸವಾಲುಗಳನ್ನು ಎದುರಿಸಿ ಮೇಲೆದ್ದು ಬಂದಿದ್ದೇವೆ. ನಮಗೆ ಬಹಳ ಮುಖ್ಯ ಸವಾಲಾಗಿದ್ದು ಕೋವಿಡ್-19 ಮತ್ತು ಉತ್ತರದ ಗಡಿಭಾಗದ ಸಮಸ್ಯೆ ಎಂದರು.

ಚೀನಾದ ಗಡಿ ಸಮಸ್ಯೆ ಬಗ್ಗೆ ಪ್ರಸ್ತಾವನೆ: ಪಾಕಿಸ್ತಾನ ಮತ್ತು ಚೀನಾ ಒಟ್ಟಾಗಿ ಪ್ರಬಲ ಬೆದರಿಕೆಯನ್ನು ನಮ್ಮ ವಿರುದ್ಧ ರೂಪಿಸುತ್ತಿದ್ದು, ಈ ಸಹಭಾಗಿತ್ವದ ಬೆದರಿಕೆಯನ್ನು ದೂರವಿಡಲು ಸಾಧ್ಯವಿಲ್ಲ. ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ. ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಸಮಯ, ಸಂದರ್ಭಗಳಲ್ಲಿ ನಿಖರವಾಗಿ ಪ್ರತ್ಯುತ್ತರ ನೀಡುವ ಹಕ್ಕನ್ನು ನಾವು ಹೊಂದಿದ್ದು, ಸಂದೇಶವನ್ನು ನಾವು ಸ್ಪಷ್ಟವಾಗಿ ತಲುಪಿಸಬೇಕಾದ ದೇಶಗಳಿಗೆ ತಲುಪಿಸಿದ್ದೇವೆ ಎಂದರು.

ಪರಸ್ಪರ ಮತ್ತು ಸಮಾನ ಭದ್ರತೆಯ ಆಧಾರದ ಮೇಲೆ ಭಾರತ ಮತ್ತು ಚೀನಾ ಮಧ್ಯೆ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಗಳನ್ನು ನಡೆಸಲಾಗುತ್ತಿದ್ದು, ಮಾತುಕತೆ ಮೇಲೆ ಸಮಸ್ಯೆ ಬಗೆಹರಿಯುವ ವಿಶ್ವಾಸ ನನಗಿದೆ ಎಂದರು.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ ಬಳಿ ಚೀನಾ ಕಡೆಯಿಂದಾಗಲಿ, ಭಾರತ ಸೇನೆಯ ಸಂಖ್ಯಾಶಕ್ತಿ ಕಡಿಮೆಯಾಗಿಲ್ಲ. ಅತಿ ಎತ್ತರದ ಸಾಂದ್ರತೆ ಪ್ರದೇಶದಲ್ಲಿ ನಮ್ಮ ಸೈನಿಕರು ಹೆಚ್ಚಾಗಿದ್ದರೂ ಕೂಡ ಚಳಿಗಾಲದಲ್ಲಿ ಗಾಯಗೊಳ್ಳುವ ಸೈನಿಕರ ಸಂಖ್ಯೆ ಹೆಚ್ಚುಕಡಿಮೆ ಕಳೆದ ವರ್ಷದಂತೆಯೇ ಮುಂದುವರಿದಿದೆ.ಕಳೆದ ವರ್ಷ ಶೇಕಡಾ 0.13ರಷ್ಟಿದ್ದರೆ ಈ ವರ್ಷ ಶೇಕಡಾ 0.15ರಷ್ಟಿದೆ ಎಂದರು.

ಉತ್ತರ ಗಡಿಗಳಲ್ಲಿ, ನಾವು ಜಾಗರೂಕರಾಗಿ ಇದ್ದೇವೆ. ಚೀನಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿರುವ ಎಲ್‌ಎಸಿಯ ಕೇಂದ್ರ ಮತ್ತು ಪೂರ್ವ ವಲಯಗಳಲ್ಲಿ ಸಂಘರ್ಷ ವಲಯಗಳಿದ್ದು, ಅಲ್ಲಿ ನಮ್ಮ ಸೇನೆ ನಿಗಾವಹಿಸುತ್ತಲೇ ಇದೆ.

ಭವಿಷ್ಯದಲ್ಲಿ ಸವಾಲುಗಳನ್ನು ಚಾಕಚಕ್ಯತೆಯಿಂದ ಎದುರಿಸಲು ತಂತ್ರಜ್ಞಾನ ಆಧಾರಿತ ಸೇನೆಯನ್ನು ಅಭಿವೃದ್ಧಿಪಡಿಸಲು ಎಲ್ಲಾ ಹೊಸ ತಂತ್ರಜ್ಞಾನಗಳನ್ನು ತರಲು ವಿಸ್ತೃತವಾದ ನೀಲನಕ್ಷೆಯನ್ನು ತಯಾರಿಸಿದ್ದೇವೆ ಎಂದು ಸಹ ಸೇನಾ ಮುಖ್ಯಸ್ಥರು ಈ ಸಂದರ್ಭದಲ್ಲಿ ಹೇಳಿದರು.

ಪ್ರತಿ ವರ್ಷ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಪಡೆಗಳು ಸಾಂಪ್ರದಾಯಿಕ ತರಬೇತಿ ಸ್ಥಳಗಳಿಗೆ ಬರುತ್ತವೆ. ಚಳಿಗಾಲದಲ್ಲಿ ತರಬೇತಿ ಮುಗಿದ ನಂತರ ತರಬೇತಿ ನಡೆದ ಸ್ಥಳವನ್ನು ತೊರೆಯಲಾಗುತ್ತದೆ. ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಆಳವಾದ ಪ್ರದೇಶಗಳಲ್ಲಿದ್ದ ಸೈನಿಕರು ಹಿಂದಕ್ಕೆ ಹೋಗಿದ್ದಾರೆಂದು ಭಾವಿಸುವುದು ನ್ಯಾಯೋಚಿತ ಮತ್ತು ಅದು ಪ್ರಸ್ಥಭೂಮಿಯಲ್ಲಿನ ಶಕ್ತಿ ಕಡಿಮೆ ಮಾಡುತ್ತದೆ ಎಂದರು.

No Comments

Leave A Comment