Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ವೆಲ್ ಕಮ್ ‘ಕೋವಿಶೀಲ್ಡ್’: ಬೆಂಗಳೂರು, ದೆಹಲಿ ಸೇರಿದಂತೆ ವಿವಿಧ ಮಹಾನಗರ ತಲುಪಿದ ಕೋವಿಡ್-19 ಲಸಿಕೆ

ಬೆಂಗಳೂರು/ನವದೆಹಲಿ: ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಿಂದ ಹೊರಟ ಕೋವಿಶೀಲ್ಡ್ ಕೋವಿಡ್-19 ಲಸಿಕೆ ಬೆಂಗಳೂರು, ದೆಹಲಿ ಸೇರಿದಂತೆ ದೇಶದ ವಿವಿಧ ಮಹಾನಗರಗಳಿಗೆ ತಲುಪಿದೆ.

ಇಂದು ಬೆಳಗ್ಗೆ 8 ಗಂಟೆಗೆ ಪುಣೆ ವಿಮಾನ ನಿಲ್ದಾಣದಿಂದ ಹೊರಟ ಸ್ಪೈಸ್ ಜೆಟ್ ವಿಮಾನ ಲಸಿಕೆಯನ್ನು ಹೊತ್ತು ದೆಹಲಿ ವಿಮಾನ ನಿಲ್ದಾಣಕ್ಕೆ 10 ಗಂಟೆ ಹೊತ್ತಿಗೆ ಬಂದಿಳಿಯಿತು. ಸೆರಂ ಇನ್ಸ್ ಟಿಟ್ಯೂಟ್ ಪುಣೆ ವಿಮಾನ ನಿಲ್ದಾಣದಿಂದ 15 ಕಿಲೋ ಮೀಟರ್ ದೂರದಲ್ಲಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ 11.45ರ ಸುಮಾರಿಗೆ ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡುವ ಬ್ರಹ್ಮಾಸ್ತ್ರ ಲಸಿಕೆ ಬಂದಿಳಿದಿದ್ದು, ಅಲ್ಲಿಂದ ವ್ಯಾಕ್ಸಿನ್ ಕೇಂದ್ರಗಳಿಗೆ ರವಾನೆಯಾಗಲಿದೆ.

ಇಂದು 56.5 ಲಕ್ಷ ಡೋಸ್ ಕೋವಿಡ್-19 ಲಸಿಕೆಯನ್ನು ಪುಣೆಯಿಂದ 13 ಮಹಾನಗರಗಳಿಗೆ ತಲುಪಿಸಲು ನಾಲ್ಕು ವಿಮಾನ ಯಾನ ಸಂಸ್ಥೆಗಳ 9 ವಿಮಾನಗಳಲ್ಲಿ ಸಾಗಿಸಲಾಗುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಮೂರು ತಾಪಮಾನ ನಿಯಂತ್ರಣ ಟ್ರಕ್ ಗಳು ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಸೆರಂ ಇನ್ಸ್ ಟಿಟ್ಯೂಟ್ ನಿಂದ ವಿಮಾನ ನಿಲ್ದಾಣ ಕಡೆಗೆ ಹೊರಟಿತು. ಲಸಿಕೆಯನ್ನು ವಾಹನಕ್ಕೆ ಹಾಕಿ ಹೊರಡುವ ಮೊದಲು ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು.

ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯ ಮತ್ತು ಬ್ರಿಟನ್-ಸ್ವೀಡನ್ ಮೂಲದ ಕಂಪೆನಿ ಅಸ್ಟ್ರಾಝೆನೆಕಾ ಅಭಿವೃದ್ಧಿಪಡಿಸಿದ್ದು ಸೆರಂ ಇನ್ಸ್ ಟಿಟ್ಯೂಟ್ ಉತ್ಪಾದನೆ ಮಾಡಿದೆ.

ಗುಜರಾತ್ ನ ಅಹ್ಮದಾಬಾದ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಹ ಕೆಲ ಹೊತ್ತಿನ ಮೊದಲು ಕೋವಿಡ್ ಲಸಿಕೆ ಬಾಕ್ಸ್ ಗಳಲ್ಲಿ ಬಂದಿಳಿಯಿತು.

ಇದೇ 16ರಿಂದ ಕೋವಿಡ್-19 ಲಸಿಕಾ ಅಭಿಯಾನ ದೇಶಾದ್ಯಂತ ಆರಂಭವಾಗುತ್ತಿದ್ದು, ಆರಂಭದಲ್ಲಿ ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತದೆ.

No Comments

Leave A Comment