Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಅರ್ಧಂಬರ್ಧ ಕಾಮಗಾರಿಯಾಗಿದ್ದ ರಸ್ತೆಯಲ್ಲಿ ಸಂಚರಿಸಿದ್ದೇ ಕೇಂದ್ರ ಸಚಿವರ ಕಾರು ಅಪಘಾತಕ್ಕೀಡಾಗಲು ಕಾರಣ..!

ಬೆಂಗಳೂರು: ವಿಧಿಯ ಆಟ ಬಲ್ಲವರಾರು ಎಂಬುದಕ್ಕೆ ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಶ್ರೀಪಾದ ನಾಯ್ಕ್ ಅವರ ಪತ್ನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆಯೇ ಸಾಕ್ಷಿಯಾಗಿದೆ.

ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಅವರ ಕಾರು ಹೆದ್ದಾರಿ ಬದಲು ಕಡಿಮೆ ದೂರ ಇರುವ ಕಾರಣ ಒಳ ರಸ್ತೆಯಲ್ಲಿ ಸಂಚರಿಸಿದ್ದು ಹಾಗೂ ಅರ್ಧಂಬರ್ಧ ರಸ್ತೆ ಕಾಮಗಾರಿಯಿಂದಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಸಚಿವರ ಪತ್ನಿ ವಿಜಯಾ ಹಾಗೂ ಆರ್.ಎಸ್.ಎಸ್ ಪ್ರಚಾರಕ ದೀಪಕ್ ದುಬೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಲ್ಲಾಪುರದ ಚಂದಗುಳಿ ಗಂಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೋಕರ್ಣಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಆಗಮಿಸಬೇಕಾಗಿದ್ದವರು, ಕಡಿಮೆ ದೂರದ ಹಿನ್ನೆಲೆಯಲ್ಲಿ ಯಲ್ಲಾಪುರ ಹೊಸಕಂಬಿ ಗೋಕರ್ಣದ ಕಿರಿದಾದ ರಸ್ತೆಯಲ್ಲಿ ಆಗಮಿಸಿದ್ದರು. ಆ ವೇಳೆ ಬೆಂಗಾವಲು ವಾಹನ ಹಿಂದೆಯೇ ಇತ್ತು ಎನ್ನಲಾಗಿದೆ. ಆದರೆ ಮಾರ್ಗಮಧ್ಯೆ ಹೊಸಕಂಬಿ ಬಳಿ ರಸ್ತೆ ಕಾಮಗಾರಿ ಅರೆಬರೆಯಾಗಿತ್ತು. ವೇಗವಾಗಿ ಬಂದ ಕಾರಿನ ಗಾಲಿಗಳು ರಸ್ತೆ ಒಂದು ಬದಿ ಹೊಂಡಕ್ಕೆ ಬಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದು ಮರಕ್ಕೆ ಬಡಿದಿದೆ.

ಕೂಡಲೇ ಸಚಿವರನ್ನು ಹಾಗೂ ಅವರ ಪತ್ನಿಯನ್ನು ಬೆಂಗಾವಲು ವಾಹನ ‌ಹಾಗೂ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಸಚಿವರ ಪತ್ನಿ ವಿಜಯಾ ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ. ಬಳಿಕ ಆರ್‌.ಎಸ್.ಎಸ್ ಪ್ರಚಾರಕ ದೀಪಕ್ ದುಬೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ. ಸಚಿವ ಶ್ರೀಪಾದ್ ಎಡಗೈಗೆ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿಗೆ ಸಾಗಿಸಲಾಗಿದೆ.

ಗಂಭೀರ ಗಾಯಗೊಂಡಿದ್ದ ಗನ್‌ಮ್ಯಾನ್ ತುಕಾರಾಮ ಪಾಟೀಲ್, ಚಾಲಕ ಚಂದನ್ ಹಾಗೂ ಸಾಯಿಕಿರಣ ಶೆಟಿಯಾ ಎಂಬುವವರಿಗೆ ಅಂಕೋಲಾ ಖಾಸಗಿ ಆಸ್ಪತ್ರೆಯಿಂದ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆ ಅರ್ಧಂಬರ್ಧ ಕಾಮಗಾರಿಯಲ್ಲಿದ್ದರೂ ಅಲ್ಲಿ ಯಾವುದೇ ರೀತಿಯ ಬ್ಯಾರಿಕೇಡ್ ಆಗಲೀ ಸೂಚನೆಗಳನ್ನು ಹಾಕಲಾಗಿರಲಿಲ್ಲ. ಘಟನೆ ಬಳಿಕ ಕೆಲ ಸ್ಥಳೀಯರು ಹಾಗೂ ಸಂಘಟನೆಗಳು ಅವೈಜ್ಞಾನಿಕ ರಸ್ತೆ ನಿರ್ಮಾಣವೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಶ್ರೀಪಾದ್ ಅವರ ಸಾಕಷ್ಟು ಸಂಬಂಧಿಕರು ಉತ್ತರ ಕನ್ನಡ ಭಾಗದವರೇ ಆಗಿದ್ದು, ಆಗಾಗಲ ಜಿಲ್ಲೆಗೆ ಭೇಟಿ ನೀಡುತ್ತಲೇ ಇರುತ್ತಾರೆ.

ದುರ್ಘಟನೆ ಸಂಭವಿಸುವ ದಿನ ಶ್ರೀಪಾದ್ ನಾಯ್ಕ್ ಅವರು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಂಟೆ ಗಣಪತಿ‌ ದೇವಾಲಯಕ್ಕೆ ತೆರಳಿ‌ ವಿಶೇಷ ಪೂಜೆ ಸಲ್ಲಿಸಿದ್ರು. ಅಲ್ಲಿಯೆ ಕೆಲಹೊತ್ತು ತಂಗಿ ಧಾರ್ಮಿಕ ಕಾರ್ಯ ನೆರವೇರಿಸಿದರು, ಬಳಿಕ ಇನ್ನೊಂದು ಖಾಸಗಿ ಕಾರ್ಯಕ್ರಮದಲ್ಲಿ‌ ಭಾಗಿಯಾಗಿ‌ ಹೋಮ‌-ಹವನ ನೆರವೇರಿಸಿದ್ರು . ಈಶ್ವರ‌ ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಿದರು. ಹೀಗೆ ಯಲ್ಲಾಪುರದಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸ್ ಬರುತ್ತಾ ಗೋಕರ್ಣ ಮಹಾಬಲೇಶ್ವರ ದರ್ಶನ ಪಡೆದು ಗೋವಾಗೆ ಹೋದರಾಯಿತು ಎಂದು ಗೋಕರ್ಣ ಹೋಗುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

No Comments

Leave A Comment