ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ನವದೆಹಲಿ: ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಜೈಲು ಸೇರಿರುವ ನಟಿ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂ ಕೋರ್ಟ್ನ ತ್ರಿಮೂರ್ತಿ ನ್ಯಾಯಪೀಠ ಮತ್ತು ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ಮಲ್ಹೋತ್ರಾ ಅವರು ರಾಗಿಣಿ ಸಲ್ಲಿಸಿದ್ದ ಅರ್ಜಿಯನ್ನು ಮುಂದಿನ ವಾರಕ್ಕೆ ಮುಂದೂಡಿದರು.
ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಲವು ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಗಿಣಿ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಿಸಿಬಿ ಪರ ವಕೀಲರು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾರೆ.
ಮಾದಕ ದ್ರವ್ಯ ಪೂರೈಕೆ ಜಾಲದೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಸೆ.4ರಂದು ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ ದ್ವಿವೇದಿ ಹೈಕೋರ್ಟಿನಲ್ಲಿ ಜಾಮೀನು ಸಿಗದೆ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ.ಎಲ್.ನಾಗೇಶ್ವರ ರಾವ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಸಿಸಿಬಿ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿ ವರದಿ ನೀಡುವಂತೆ ನೋಟಿಸ್ ಸಲ್ಲಿಸಿತ್ತು.
ಇದೇ ವೇಳೆ ಯಾವುದೇ ಕಾರಣಕ್ಕೂ ರಾಗಿಣಿಗೆ ಜಾಮೀನು ನೀಡದಂತೆ ಬೆಂಗಳೂರಿನ ಕ್ರೈಮ್ ಬ್ರಾಂಚ್ ಪೊಲೀಸರು ಕೋರ್ಟಿಗೆ ಆಕ್ಷೇಪಣಾ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಪ್ರಕರಣದ ಆರೋಪಿಗಳಾದ ಶಿವಪ್ರಕಾಶ್, ಈರಪ್ಪ ಅವರ ಅರ್ಜಿ ವಿಚಾರಣೆಯೂ ಶುಕ್ರವಾರವೇ ನಡೆಯುವುದರಲ್ಲಿತ್ತು.
ಇನ್ನು ಸಿಸಿಬಿ ಪರ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ನಟಿ ರಾಗಿಣಿ ವಿರುದ್ಧ ಎನ್ ಡಿಪಿಎಸ್ ಆಕ್ಟ್ 27ರಡಿ ಪ್ರಕರಣ ದಾಖಲಾಗಿದ್ದು, ಯಾವುದೇ ಕಾರಣ ಜಾಮೀನು ನೀಡಬಾರದು ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದರು.