ಮತ್ತೊಂದು ನಿರ್ಭಯಾ: ಮಹಿಳೆಯ ಗುಪ್ತಾಂಗಕ್ಕೆ ರಾಡ್ ನಿಂದ ಹೊಡೆದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ!
ಬದೌನ್(ಉತ್ತರ ಪ್ರದೇಶ): ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಭಯಾನಕ ನೆನಪುಗಳನ್ನು ಮರಳಿ ತರುವ ಪ್ರಕರಣವೊಂದರಲ್ಲಿ, ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಘೈತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೇವಾಲಿ ಗ್ರಾಮದಲ್ಲಿ ಭಾನುವಾರ ಈ ಪ್ರಕರಣ ನಡೆದಿದೆ.
ಸಂತ್ರಸ್ತೆಯ ಶವವನ್ನು ಮಹಿಳಾ ವೈದ್ಯರು ಸೇರಿದಂತೆ ಮೂವರು ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆ ನಡೆಸಿತು. ಮಂಗಳವಾರ ಬಿಡುಗಡೆಯಾದ ಮರಣೋತ್ತರ ವರದಿಯ ಪ್ರಕಾರ, ದುಷ್ಕರ್ಮಿಗಳು ಆಕೆಯ ಶ್ವಾಸಕೋಶವನ್ನು ಹಾನಿಗೊಳಿಸಿದ್ದಾರೆ.ಕಾಲು ಮತ್ತು ಪಕ್ಕೆಲುಬುಗಳನ್ನು ಮುರಿದದ್ದಲ್ಲದೆ ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಹಾನಿಗೊಳಿಸಿದ್ದಾರೆ.
50 ವರ್ಷದ ಮಹಿಳೆ ತೀವ್ರ ರಕ್ತಸ್ರಾವ ಹಾಗೂ ತನ್ನ ಖಾಸಗಿ ಅಂಗಗಳಲ್ಲಿ ತೀವ್ರವಾದ ಗಾಯಗಳಿಂದ ಸಾವನ್ನಪ್ಪಿದ್ದಾಳೆ ಎಂದು ವರದಿ ಹೇಳುತ್ತದೆ. ಅಲ್ಲದೆ ಮಹಿಳೆಯ ಮೇಲೆ ಭಾರವಾದ ವಸ್ತುವಿನಿಂಡ ಹೊಡೆಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಬದೌನ್ ಎಸ್ಎಸ್ಪಿ ಸಂಕಲ್ಪ ಶರ್ಮಾ ಸ್ಥಳಕ್ಕೆ ಧಾವಿಸಿದ್ದು ಆರೋಪಿಗಳ ಶೋಧಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ.
ಪ್ರಕರಣದಲ್ಲಿ ಪೊಲೀಸರು ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಆರೋಪಿ ಮಹಂತ್ ಬಾಬಾ ಸತ್ಯನಾರಾಯಣ ಅವರಿಗಾಗಿ ಶೋಧ ನಡೆಸಿದ್ದಾರೆ. ಇನ್ನು ಇದಾಗಲೇ ಮಹಂತ್ ಬಾಬಾ ಅವರ ಶಿಷ್ಯ ವೇದಾರಾಮ್ ಮತ್ತು ಚಾಲಕ ಜಸ್ಪಾಲ್ ಅವರುಗಳನ್ನು ಬಂಧಿಸಲಾಗಿದೆ.
ಉಘೈತಿ ಪೊಲೀಸ್ ಠಾಣೆಯ ಎಸ್ಎಚ್ಒ ಅವರನ್ನು ಅಮಾನತುಗೊಳಿಸಲಾಗಿದೆ.
ವರದಿಗಳ ಪ್ರಕಾರ, ಮಹಿಳೆ ಭಾನುವಾರ ಸಂಜೆ ಹತ್ತಿರದ ಹಳ್ಳಿಯ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಳು ಮತ್ತೆ ಮನೆಗೆ ಹಿಂತಿರುಗಿರಲಿಲ್ಲ. . ಆರೋಪಿಗಳು ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಮಹಿಳೆಯ ಶವವನ್ನು ಮನೆಯ ಹೊರಗೆ ಎಸೆದು ಹೋಗಿದ್ದರು.