Log In
BREAKING NEWS >
ರೈತ ಮಕ್ಕಳಿಗೆ ಶಿಷ್ಯವೇತನ, ಸಂಧ್ಯಾ ಸುರಕ್ಷ, ಅಂಗವಿಕಲ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದ ಮೊದಲ ನಿರ್ಣಯ...

ಎಂಎಸ್ ಪಿ ಕುರಿತಂತೆ ಸ್ವಾಮಿನಾಥನ್ ವರದಿ ಶಿಫಾರಸ್ಸು ಅನುಷ್ಠಾನಗೊಳಿಸಿ: ಕೇಂದ್ರಕ್ಕೆ ರೈತ ಸಂಘಟನೆಗಳ ಆಗ್ರಹ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಎಂಎಸ್ ಪಿ ಕುರಿತಂತೆ ಸ್ವಾಮಿನಾಥನ್ ವರದಿ ಶಿಫಾರಸ್ಸು ಅನುಷ್ಠಾನಗೊಳಿಸಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೇಶದ ವಿವಿಧ ಭಾಗಗಳ ರೈತರು ದೆಹಲಿಯ ಗಡಿಭಾಗಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟಿದೆ. ತೀವ್ರ ಚಳಿಯಲ್ಲೇ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ, ಭಾನುವಾರ ಮಳೆ ಕೂಡ ಅಡ್ಡಿ ಮಾಡಿದೆ. ಆದರೂ ರೈತರು ಪ್ರತಿಭಟನಾ ಸ್ಥಳವನ್ನು ಬಿಟ್ಟು ಕದಲದ ರೈತರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

‘ಹವಾಮಾನ ನಮ್ಮ ಪ್ರತಿಭಟನೆಗೆ ಅಡ್ಡಿಯಾಗುವುದಿಲ್ಲ. ನಮ್ಮ ಉತ್ಸಾಹ ಕುಂದಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುತ್ತೆವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಇದೇ ವೇಳೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರರಾದ ರಾಕೇಶ್ ಟೆಕೈಟ್ ಅವರು ಮಾತನಾಡಿ, ಇಂದಿನ ಸಭೆಯಲ್ಲಿ ರೈತರ ಸಾಕಷ್ಟು ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ರೈತರು ವಿವಾದಿತ ಕೃಷಿ ಕಾನೂನುಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಬಾರದು. ಯಾವುದೇ ಕಾರಣಕ್ಕೂ ಕೃಷಿ ಕಾನೂನುಗಳನ್ನು ಒಪ್ಪಿ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ. ರೈತರು ಈ ಚಳುವಳಿಯನ್ನು ತಮ್ಮ ಹೃದಯಕ್ಕೆ ತೆಗೆದುಕೊಂಡಿದ್ದಾರೆ. ನಾವು ಈ ಕಾನೂನುಗಳನ್ನು ರದ್ದುಪಡಿಸುವುದಕ್ಕಿಂತ ಬೇರಾವುದೇ ಮಾರ್ಗವನ್ನು ಪರಿಗಣಿಸುವುದಿಲ್ಲ. ಸರ್ಕಾರ ಸ್ವಾಮಿನಾಥನ್ ಅವರ ವರದಿಯನ್ನು ಜಾರಿಗೆ ತರಬೇಕು ಮತ್ತು ಎಂಎಸ್ಪಿ ಬಗ್ಗೆ ಕಾನೂನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

ಇನ್ನು ಸರ್ಕಾರ ಮತ್ತು ರೈತ ಸಂಘಟನೆಗಳು ನಡುವೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ಎರಡೂ ಕಡೆಯವರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಇಂದು (ಸೋಮವಾರ) ಕೇಂದ್ರ ಸರ್ಕಾರ ಮತ್ತು ‍ಪ್ರತಿಭಟನಾ ರೈತ ಸಂಘಟನೆಗಳ ನಡುವೆ ಏಳನೇ ಸುತ್ತಿನ ಮಾತುಕತೆ ನಡೆಯಲಿದೆ.

ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ದೆಹಲಿಯ ಸಿಂಘು, ಟಿಕ್ರಿ, ಧಂನ್ಸಾ ಗಡಿಭಾಗಗಳನ್ನು ಬಂದ್ ಮಾಡಲಾಗಿದೆ. ಪ್ರಯಾಣಿಕರು ದೆಹಲಿ ತಲುಪಲು ಆನಂದ್ ವಿಹಾರ್, ಡಿಎನ್‌ಡಿ, ಭೋಪ್ರಾ ಮತ್ತು ಲೋನಿ ಗಡಿಭಾಗದ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಇತ್ತ ರೈತರ ಪರ ಒಕ್ಕೂಟಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದಾಗಿ ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್ವಿಂದರ್ ಎಸ್ ಸಾಬ್ರಾ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

No Comments

Leave A Comment