Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ಜನವರಿ 8-30ರ ನಡುವೆ ಬ್ರಿಟನ್ ನಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೂ ಕೊರೋನಾ ಪರೀಕ್ಷೆ ಕಡ್ಡಾಯ: ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ರೂಪಾಂತರಿ ಕೊರೋನಾ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನವರಿ 8-30 ನಡುವೆ ಬ್ರಿಟನ್ ನಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೂ ಕೊರೋನಾ ಪರೀಕ್ಷೆ ಕಡ್ಡಾಯ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.

ಬ್ರಿಟನ್ ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗಾಗಿಯೇ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿ ಜನವರಿ 8-30ರ ನಡುವೆ ಬ್ರಿಟನ್ ನಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರೆಲ್ಲರಿಗೂ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ರೂಪಾಂತರಿ ಕೊರೋನಾ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ಪರೀಕ್ಷಿಸುವ ಸಲುವಾಗಿ ಭಾರತ ಈ ಹಿಂದೆ ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳನ್ನು ಡಿಸೆಂಬರ್ 23 ರಿಂದ 31ರವರೆಗೂ ರದ್ದುಗೊಳಿಸಿತ್ತು. ಬಳಿಕ ಮತ್ತೆ ಜನವರಿ 7 ರವರೆಗೂ ವಿಮಾನಗಳ ರದ್ದು ನಿರ್ಧಾರವನ್ನು ವಿಸ್ತರಣೆ ಮಾಡಿತ್ತು.

ಇದೀಗ ಜನವರಿ 8 ರಿಂದ ವಿಮಾನಗಳ ಪ್ರಯಾಣಕ್ಕೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ ಭಾರತಕ್ಕೆ ಆಗಮಿಸುವವರಿಗಾಗಿ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು ಇಂತಿವೆ…

  • ಬ್ರಿಟನ್ ನಿಂದ ಭಾರತಕ್ಕೆ ಬರುವ ಪ್ರತೀಯೊಬ್ಬ ಪ್ರಯಾಣಿಕನೂ ಪ್ರಯಾಣಕ್ಕೆ 72 ಗಂಟೆಗಳ ಮುಂಚಿತವಾಗಿ ಮಾಡಿಸಿಕೊಂಡು ಕೊರೋನಾ ನೆಗೆಟಿವ್ ಇರುವ ವೈದ್ಯಕೀಯ ವರದಿಯನ್ನು ತರಬೇಕಿದೆ

  • ಜನವರಿ 8 ರಿಂದ ಭಾರತ-ಬ್ರಿಟನ್ ನಡುವಿನ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗುತ್ತಿದ್ದು, ಎರಡು ರಾಷ್ಟ್ರಗಳ ನಡುವೆ ವಾರಕ್ಕೆ 30 ವಿಮಾನಗಳು ಮಾತ್ರ ಹಾರಾಟ ನಡೆಸಲಿವೆ. ಈ ವ್ಯವಸ್ಥೆ ಜನವರಿ 23ರವರೆಗೂ ಮುಂದುವರೆಯಲಿದೆ.

  • ವಿಮಾನಗಳು ಸಂಚಾರ ನಡೆಸುವ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಲ್ಲಿ ಕೊರೋನಾ ನೆಗೆಟಿವ್ ವರದಿ ಇರುವ ಕುರಿತು ಖಚಿತಪಡಿಸಿಕೊಳ್ಳಬೇಕಿದೆ.

  • ಆರ್’ಟಿ-ಪಿಸಿಆರ್ ಪರೀಕ್ಷೆ ಅಥವಾ ವೈದ್ಯಕೀಯ ವರದಿಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಸೂಕ್ತ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಬೇಕು.

  • ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಪ್ರಯಾಣಿಕರಲ್ಲಿ ಕೊರೋನಾ ಪಾಸಿಟಿವ್ ಬಂದಿರುವುದು ಕಂಡು ಬಂದರೆ, ಆಯಾ ರಾಜ್ಯಗಳಿಗೆ ಸಂಬಂಧ ಪಟ್ಟಂತಹ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಅಂತಹ ಪ್ರಯಾಣಿಕರನ್ನು ಐಸೋಲೇಷನ್ ನಲ್ಲಿ ಇರಿಸಬೇಕು. ಇದಕ್ಕಾಗಿ ವಿಮಾನ ನಿಲ್ದಾಣಗಳು ವ್ಯವಸ್ಥೆ ಕಲ್ಪಿಸಬೇಕು. ಜೀನೋಮಿಕ್ ಸೀಕ್ವೆನ್ಸಿಂಗ್ ನಲ್ಲಿ ರೂಪಾಂತರಿ ಕೊರೋನಾ ಕಂಡು ಬಂದಿದ್ದೇ ಆದರೆ, ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕ ಐಸೋಲೇಷನ್ ಘಟಕದಲ್ಲಿ ಇರಿಸಬೇಕು.

  • ಕೊರೋನಾ ಪಾಸಿಟಿವ್ ಬಂದ 14 ದಿನಗಳ ಬಳಿಕ ಮತ್ತೆ ಆ ವ್ಯಕ್ತಿಗೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ನೆಗೆಟಿವ್ ಬರುವವರೆಗೂ ಆ ವ್ಯಕ್ತಿ ಐಸೋಲೇಷನ್ ನಲ್ಲಿಯೇ ಇರಬೇಕಾಗುತ್ತದೆ.

  • ಸೋಂಕಿತ ವ್ಯಕ್ತಿ ಪ್ರಯಾಣಿಸಿದ ವಿಮಾನದಲ್ಲಿ ಅಕ್ಕ-ಪಕ್ಕ, ಎದುರು ಹಾಗೂ ಮೂರು ಸೀಟುಗಳ ಹಿಂದಿನವರೆಗೂ ಕುಳಿತ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸಲಾಗುತ್ತದೆ. ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದೇ ಆದರೆ, ಅಂತಹವರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟಂತಹ ಜಿಲ್ಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗುತ್ತದೆ.

  • ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ವಿಮಾನ ನಿಲ್ದಾಣಗಳಲ್ಲಿ ಮಾರ್ಗಸೂಚಿಗಳ ನಿಯಮವನ್ನು ಜಾರಿಗೆ ತರಲು ಸಹಾಯ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

No Comments

Leave A Comment