Log In
BREAKING NEWS >
ಮ೦ಗಳವಾರದಿ೦ದ ಪಿತೃ ಪಕ್ಷದ ಆರ೦ಭ...

ಸಿಸಿಬಿ ಪೊಲೀಸರಿಂದ ಇಬ್ಬರು ಅಂತಾರಾಜ್ಯ ಕನ್ನಗಳವು ಆರೋಪಿಗಳ ಸೆರೆ; 2.25 ಕೋಟಿ ರೂ.ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು: ಸರಗಳ್ಳರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿ, 35 ಪ್ರಕರಣಗಳನ್ನು ಭೇದಿಸಿ 2.25 ಕೋಟಿ ರೂ ಮೌಲ್ಯದ 4 ಕೆ.ಜಿ.ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುರಾದಾಬಾದ್ ನಿವಾಸಿಗಳಾದ ಫಯೂಮ್ ಅಲಿಯಾಸ್ ಎಟಿಎಂ ಫಯೂಮ್ (35) ಹಾಗೂ ಮುರಸಲೀಂ ಮುಹಮ್ಮದ್ ಅಲಿಯಾಸ್ ಸಲೀಂ (42) ಬಂಧಿತ ಆರೋಪಿಗಳು. ಆರೋಪಿಗಳು ಉತ್ತರ ಪ್ರದೇಶ, ದೆಹಲಿ, ಹರಿಯಾಣ ರಾಜ್ಯಗಳಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ಸರಣಿ ಮನೆ ಕನ್ನಕಳವು ಮಾಡುತ್ತಿದ್ದರು. ಆರೋಪಿಗಳಿಂದ 4 ಕೆ.ಜಿ.ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನದಿಂದ ಸುಮಾರು 35 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಮುಖ ಆರೋಪಿ ಫಯೂಮ್ ವಿರುದ್ಧ ಉತ್ತರ ಪ್ರದೇಶದ ಮುರಾದಾಬಾದ್ ಜಿಲ್ಲೆಯಲ್ಲಿ ದರೋಡೆ, ಕೊಲೆ, ಕೊಲೆಯತ್ನ ಹಾಗೂ ಇತರೆ ಸುಮಾರು 40 ಪ್ರಕರಣಗಳು ದಾಖಲಾಗಿವೆ. ಈತನ ಸುಳಿವು ನೀಡಿದವರಿಗೆ ಉತ್ತರ ಪ್ರದೇಶ ಸರ್ಕಾರ 10,000 ರೂ. ನಗದು ಬಹುಮಾನವನ್ನು ಕೂಡ ಘೋಷಿಸಿದೆ. ಆರೋಪಿ 2016ನೇ ಸಾಲಿನಲ್ಲಿ ಉತ್ತರ ಪ್ರದೇಶದ ನೋಯಿಡಾ ಜೈಲಿನ್ಲಲಿರುವಾಗ ಇತರ ಆರೋಪಿಗಳೊಂದಿಗೆ ಕಳ್ಳತನಕ್ಕೆ ಸಂಚು ರೂಪಿಸಿಕೊಂಡಿದ್ದ. 2017ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ವೃತ್ತಿಪರ ಕಳ್ಳತನಕ್ಕೆ ಇಳಿಯಲು ಗ್ಯಾಂಗ್ ಕಟ್ಟಿದ್ದಾನೆ. ಗ್ಯಾಂಗ್ ಕಟ್ಟಿದ ಬಳಿಕ ಉತ್ತರ ಪ್ರದೇಶ, ಹರಿಯಾಣ, ದೆಹಲಿಯಿಂದ ಕಾರಿನಲ್ಲಿ ಕರ್ನಾಟಕದ ಬೆಂಗಳೂರು, ಬೆಳಗಾವಿ, ಗೋವಾ ರಾಜ್ಯದ ಪಣಜಿ, ತೆಲಂಗಾಣದ ಹೈದರಾಬಾದ್ ಗೆ ಬಂದು ಸರಣಿ ಮನೆ ಕನ್ನ ಕಳವು ಮಾಡಿದ್ದಾನೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಕನ್ನಕಳವು ಮಾಡಿದ ಬಗ್ಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ಕಳವು ಮಾಡಿದ ಮಾಲುಗಳನ್ನು ಹರಿಯಾಣ ರಾಜ್ಯದ ಗುರುಗಾಂವ್ ಜೈಲಿನಲ್ಲಿರುವ ಕೊಲೆ ಕೇಸಿನ ಆರೋಪಿ ಅಶೋಕ್ ಲಾಟಿ ಎಂಬಾತನ ಮೂಲಕ ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಆರೋಪಿಗಳು ತಿಳಿಸಿದ ಮಾಹಿತಿ ಮೇರೆಗೆ, ಸಿಸಿಬಿ ಪೊಲೀಸ್ ತಂಡ ಹರಿಯಾಣಕ್ಕೆ ಹೋಗಿದೆ.

ಚಿನ್ನದ ಒಡವೆಗಳನ್ನು ಅಮಾನತುಪಡಿಸಲು ಆರೋಪಿಗಳೊಂದಿಗೆ ಹರಿಯಾಣದ ಗುರಗಾಂವ್ ಜಿಲ್ಲೆಯ ಜೈಲಿನ ಬಳಿ ಕರೆದುಕೊಂಡು ಹೋಗಿ ಅಶೋಕ್ ಪಾಟಿಯ ಬಗ್ಗೆ ಗುರಗಾಂವ್ ಜೈಲಿನ ಅಧಿಕಾರಿಗಳನ್ನು ವಿಚಾರಿಸಿದಾಗ, ಅಶೋಕ್ ಲಾಟಿ ಎಂಬಾತ ಒಂದು ವರ್ಷದ ಹಿಂದೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಆರೋಪಿ ಫಯೂಮ್ ಸುಳ್ಳು ಹೇಳಿ ಪೊಲೀಸರ ದಿಕ್ಕು ತಪ್ಪಿಸಲು ಪ್ರಯತ್ನಿಸಿರುವುದು ಗೊತ್ತಾಗಿದೆ. ನಂತರ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ, ಆರೋಪಿಗಳು ಕಳವು ಮಾಡಿದ ನಂತರ ಚಿನ್ನದ ಒಡವೆಗಳನ್ನು ಹಂಚಿಕೊಂಡು ತಮ್ಮ ಪಾಲಿಗೆ ಬಂದ ಒಡವೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆರೋಪಿ ಫಯೂಮ್ ತನ್ನ ಪಾಲಿಗೆ ಬಂದ ಚಿನ್ನದ ಒಡವೆಗಳನ್ನು ಉತ್ತರ ಪ್ರದೇಶದ ಮುರಾದಾಬಾದ್ ಎಂಬ ಊರಿನಲ್ಲಿ ತನ್ನ ಮನೆಯಲ್ಲಿ ಹಾಗೂ ತನ್ನ ತಂಗಿಯ ಮನೆಯಲ್ಲಿ ಇಟ್ಟಿರುವುದು ತಿಳಿದುಬಂದಿದೆ. ನಂತರ ಆರೋಪಿಯೊಂದಿಗೆ ಹರಿಯಾಣದ ಗುರಗಾಂವ್ ನಿಂದ ಉತ್ತರ ಪ್ರದೇಶದ ಮುರಾದಾಬಾದ್ ಗೆ ಸತತ 7 ದಿನಗಳವರೆಗೆ ಯಾತ್ರೆ ಮಾಡಿ ತಲುಪಿದೆ. ಅಲ್ಲಿನ ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ತನಿಖೆ ಕೈಗೊಂಡು 4 ಕೆ.ಜಿ.ಚಿನ್ನದ ಒಡವೆಗಳನ್ನು ಸಿಸಿಬಿ ತಂಡ ವಶಪಡಿಸಿಕೊಂಡಿದೆ ಎಂದು ಕಮಲ್ ಪಂಥ್ ತಿಳಿಸಿದರು.

ಸಿಸಿಬಿ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ.ಪಿ.ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ನಾಗರಾಜ್, ಬೆರಳುಮುದ್ರೆ ಘಟಕದ ಎಸಿಪಿ ರಾಘವೇಂದ್ರ ಶಿಂದೆ, ಪೊಲೀಸ್ ಇನ್ಸ್ ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ತಂಡ ಸುಮಾರು 2 ಕೋಟಿ ಬೆಲೆ ಬಾಳುವ 4 ಕೆ.ಜಿ.ತೂಕದ ಚಿನ್ನಾಭರಣ ವಶಪಡಿಸಿಕೊಂಡಿದೆ. ಈ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ 75,000 ರೂ.ನಗದು ಬಹುಮಾನ ಘೋಷಿಸಿದ್ದಾರೆ.

ಆರೋಪಿಗಳ ಬಂಧನದಿಂದ ಸುಮಾರು 35 ಪ್ರಕರಣಗಳು ಬೆಳಕಿಗೆ ಬಂದಿದೆ.

ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 4, ಕೊಡಿಗೇಹಳ್ಳಿಯ 2, ಅನ್ನಪೂರ್ಣೇಶ್ವರಿ ನಗರದ 4, ಬ್ಯಾಡರಹಳ್ಳಿಯ 9, ನಂದಿನಿಲೇಔಟ್ ನ 5, ರಾಜಗೋಪಾಲನಗರದ 2, ಕಾಡುಗೊಂಡನಹಳ್ಳಿ, ಹೆಣ್ಣೂರು , ಅಮೃತಹಳ್ಳಿ, ಬಾಣಸವಾಡಿ, ಹೈಗ್ರೌಂಡ್ಸ್ , ಜ್ಞಾನಭಾರತಿಯ ತಲಾ 1 ಪ್ರಕರಣ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ 3 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಕಮಲ್ ಪಂಥ್ ತಿಳಿಸಿದರು.

No Comments

Leave A Comment