Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಕೊಹ್ಲಿ-ರಹಾನೆ ನಾಯಕತ್ವದ ನಡುವಿನ ವ್ಯತ್ಯಾಸ ತಿಳಿಸಿದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

ಮೆಲ್ಬೋರ್ನ್‌: ಟೀಂ ಇಂಡಿಯಾ ಮುಖ್ಯ ಕೋಚ್‌ ರವಿಶಾಸ್ತ್ರಿ, ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಾಯಕತ್ವದ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಶನಿವಾರ ಆರಂಭವಾಗಿದ್ದ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ, ಪ್ರಥಮ ಇನಿಂಗ್ಸ್‌ನಲ್ಲಿ 195 ರನ್‌ಗಳಿಗೆ ಆಲೌಟ್‌ ಆಗಿತ್ತು. ನಂತರ ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತದ ಪರ ಅಜಿಂಕ್ಯ ರಹಾನೆ ವೃತ್ತಿ ಜೀವನದ 12ನೇ ಶತಕ ಸಿಡಿಸಿದರು. ಆ ಮೂಲಕ ಭಾರತ 131 ರನ್‌ಗಳ ನಿರ್ಣಾಯಕ ಮುನ್ನಡೆ ಸಾಧಿಸಿತ್ತು.

ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 200 ರನ್‌ಗಳಿಗೆ ಕುಸಿಯುವ ಮೂಲಕ ಭಾರತಕ್ಕೆ 70 ರನ್‌ ಸಾಧಾರಣ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ರಹಾನೆ ಪಡೆ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆ ಮೂಲಕ ಬಾರ್ಡರ್‌-ಗವಾಸ್ಕರ್‌ ಟೆಸ್ಟ್ ಸರಣಿಯಲ್ಲಿ ಭಾರತ 1-1 ಸಮಬಲ ಸಾಧಿಸಿತು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಶಾಸ್ತ್ರಿ, “ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ರಹಾನೆ, ಒಬ್ಬ ಚಾಣಾಕ್ಷ ನಾಯಕ. ಅವರ ಶಾಂತತೆಯ ಹಿಡಿತವು ಪದಾರ್ಪಣೆ ಮಾಡಿದ ಶುಭಮನ್‌ ಗಿಲ್‌, ಮೊಹಮ್ಮದ್‌ ಸಿರಾಜ್‌ ಸೇರಿದಂತೆ ಬೌಲರ್‌ಗಳಿಗೆ ಸಹಾಯ ಮಾಡಿತು. ಗಾಯಾಳು ಉಮೇಶ್‌ ಯಾದವ್‌ ಅಲಭ್ಯತೆಯ ನಡುವೆಯೂ ರಹಾನೆ ಅವರ ಶಾಂತ ಸ್ವಭಾವ ಪಂದ್ಯದ ಮೇಲೆ ಪ್ರಭಾವ ಬೀರಿತ್ತು,” ಎಂದು ಹೇಳಿದರು.

ಸದ್ಯ ಪಿತೃತ್ವ ರಜೆಯೊಂದಿಗೆ ತವರಿಗೆ ಮರಳಿರುವ ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಈ ಇಬ್ಬರ ನಾಯಕತ್ವದ ನಡುವೆ ಇರುವ ವ್ಯತ್ಯಾಸವೇನು ಎಂದು ರವಿಶಾಸ್ತ್ರಿಗೆ ಸುದ್ದಿಗಾರರು ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಶಾಸ್ತ್ರಿ, “ಈ ಇಬ್ಬರೂ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ವಿರಾಟ್‌ ಕೊಹ್ಲಿ ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದರೆ, ಅಜಿಂಕ್ಯ ರಹಾನೆ ಶಾಂತ ಸ್ವಭಾವದಿಂದ ಸಂಯೋಜನೆಯಾಗಿದ್ದಾರೆ. ಇವರಿಬ್ಬರೂ ಪಂದ್ಯದಲ್ಲಿ ಅವರದೇ ಆದ ಪಾತ್ರವನ್ನು ನಿರ್ವಹಿಸುತ್ತಾರೆ,” ಎಂದು ಹೇಳಿದರು.

“ವಿರಾಟ್‌ ಕೊಹ್ಲಿ ಮೈದಾನದಲ್ಲಿ ಹೇಗಿರುತ್ತಾರೆಂದು ನಿಮಗೆ ಗೊತ್ತಿದೆ. ಆದರೆ, ರಹಾನೆ ಎಂತಹ ಸನ್ನಿವೇಶವಿದ್ದರೂ ಬಹಳ ಶಾಂತ ಭಾವದೊಂದಿಗೆ ಇರುತ್ತಾರೆ ಹಾಗೂ ತಂಡಕ್ಕೆ ಏನು ಬೇಕು ಎಂಬ ಬಗ್ಗೆ ಅವರಿಗೆ ಆಳವಾದ ಅರಿವು ಇರುತ್ತದೆ,” ಎಂದು ತಿಳಿಸಿದರು.

No Comments

Leave A Comment