BREAKING NEWS >
ನ.29ರ೦ದು ಶ್ರೀಕ್ಷೇತ್ರಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರ೦ಭ...

ದಾರಿ ತಪ್ಪಿದ ಮರಿಯಾನೆ; ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ಘಟನೆ

ದಕ್ಷಿಣ ಕನ್ನಡ(ಅ.30): ಕೃಷಿತೋಟಕ್ಕೆ ನುಗ್ಗಿದ ಆನೆ ಹಿಂಡಿನಿಂದ ಮರಿಯಾನೆಯೊಂದು ಬೇರ್ಪಟ್ಟು ಕೃಷಿ ತೋಟದಲ್ಲಿ ಉಳಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಎಂಬಲ್ಲಿ ನಡೆದಿದೆ. ಕಾಡಿನಲ್ಲಿ ಆಹಾರದ ಕೊರತೆ ಕಂಡು ಬರುವ ಸಂದರ್ಭದಲ್ಲಿ ದಟ್ಟಾರಣ್ಯದಲ್ಲಿರುವ ಕಾಡಾನೆಗಳ ಗುಂಪು ಕಾಡಿನಂಚಿನಲ್ಲಿರುವ ಕೃಷಿತೋಟಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುವುದು ಸಾಮಾನ್ಯವಾಗಿದೆ.

ಇದೇ ರೀತಿ ಬೆಳ್ತಂಗಡಿಯ ಕಡಿರುದ್ಯಾವರದ ಡೀಕಯ್ಯ ಗೌಡ ಎಂಬವರಿಗೆ ಸೇರಿದ ಕೃಷಿತೋಟಕ್ಕೆ ನಿನ್ನೆ ರಾತ್ರಿ ನುಗ್ಗಿರುವ ಆನೆಗಳ ಹಿಂಡು ಭಾರೀ ಪ್ರಮಾಣದ ಕೃಷಿಯನ್ನು ತಿಂದು ಮರಳಿದೆ. ಆದರೆ ಕಾಡಿಗೆ ಮರಳುವ ಸಂದರ್ಭದಲ್ಲಿ ಕಾಡಾನೆಗಳ ಹಿಂಡಿನಲ್ಲಿದ್ದ ಮರಿಯಾನೆಯೊಂದು ತೋಟದಲ್ಲೇ ಉಳಿದುಕೊಂಡಿದೆ. ಸುಮಾರು ನಾಲ್ಕೈದು ತಿಂಗಳ ಮರಿಯಂತೆ ಕಂಡು ಬರುತ್ತಿರುವ ಈ ಮರಿಯಾನೆ ಹಿಂಡಿನಿಂದ ಹೇಗೋ ಬೇರೆಯಾಗಿದ್ದು, ಕಾಡಿನ ದಾರಿ ಕಾಣದೆ ಕೃಷಿತೋಟದಲ್ಲಿ ರಾತ್ರಿ ಕಳೆದಿದೆ.

ಇಂದು ಬೆಳಿಗ್ಗೆ ಎಂದಿನಂತೆ ತೋಟದ ಮಾಲಕ ಡೀಕಯ್ಯ ಗೌಡರು ತೋಟಕ್ಕೆ ಬಂದ ಸಂದರ್ಭದಲ್ಲಿ ಆನೆಮರಿಯು ಇರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಈ ವಿಚಾರವನ್ನು ಊರವರ ಹಾಗೂ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ. ಮರಿಯಾನೆಯನ್ನು ನೋಡಲು ಭಾರೀ ಸಂಖ್ಯೆಯ ಜನ ತೋಟದ ಕಡೆಗೆ ಬರಲಾರಂಭಿಸಿದ್ದಾರೆ. ಈ ನಡುವೆ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಗಳ ತಂಡವೂ ಸ್ಥಳಕ್ಕೆ ಭೇಟಿ ನೀಡಿದ್ದು, ಮರಿಯಾನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಕಡಿರುದ್ಯಾವರ ಪ್ರದೇಶ ದಟ್ಟ ಅರಣ್ಯಗಳ ನಡುವೆ ಇರುವಂತಹ ಗ್ರಾಮವಾಗಿದ್ದು, ಈ ಭಾಗದಲ್ಲಿ ಆನೆಗಳ ಹಾವಳಿಯೂ ಹೆಚ್ಚಾಗಿದೆ. ಮರಿಯಾನೆಯನ್ನು ಹುಡುಕಿಕೊಂಡು ಆನೆಗಳ ಹಿಂಡು ಮತ್ತೆ ಇದೇ ಕೃಷಿತೋಟಕ್ಕೆ ಬರುವ ಸಾಧ್ಯತೆಯೂ ಇದೆ.
ಈ ಹಿನ್ನಲೆಯಲ್ಲಿ ಆನೆ ಮರಿಯನ್ನು ಯಾವ ರೀತಿ ಆನೆಗಳ ಹಿಂಡಿಗೆ ಮತ್ತೆ ಸೇರಿಸಬಹುದು ಎನ್ನುವ ಬಗ್ಗೆಯೂ ಅರಣ್ಯ ಇಲಾಖೆ ಅಧಿಕಾರಿಗಳು ತಜ್ಞರ ಅಭಿಪ್ರಾಯವನ್ನೂ ಸಂಗ್ರಹಿಸಲಾರಂಭಿಸಿದ್ದಾರೆ.

No Comments

Leave A Comment