ಉಡುಪಿ: ಸ್ಥಳೀಯ ನಗರಸಭೆಯ ಅಧ್ಯಕ್ಷೆಯಾಗಿ ಪರ್ಕಳ ವಾರ್ಡ್ ಸದಸ್ಯೆ ಸುಮಿತ್ರಾ ಆರ್. ನಾಯಕ್ ಹಾಗೂ ಉಪಾಧ್ಯಕ್ಷೆಯಾಗಿ ಮಲ್ಪೆ ಕೊಳ ವಾರ್ಡ್ ಸದಸ್ಯೆ ಲಕ್ಷ್ಮೀ ಮಂಜುನಾಥ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆ (ಎ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಇಂದು ನಗರಸಭೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಕುಂದಾಪುರ ಸಹಾಯಕ ಆಯುಕ್ತ ರಾಜು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಬಳಿಕ ನಡೆದ ಅಭಿನಂದನ ಸಭೆಯಲ್ಲಿ ಶಾಸಕ ರಘುಪತಿ ಭಟ್, ಸದಸ್ಯರಾದ ಪ್ರಭಾಕರ ಪೂಜಾರಿ, ರಮೇಶ್ ಕಾಂಚನ್, ವಿಜಯ್ ಕೊಡವೂರು, ಶ್ರೀಕೃಷ್ಣ ರಾವ್ ಕೊಡಂಚ, ಅಮೃತಾ ಕೃಷ್ಣಮೂರ್ತಿ, ಯೋಗೀಶ್ ಸಾಲ್ಯಾನ್ ಶುಭಾಶಂಸನೆಗೈದರು.
ಪೌರಾಯುಕ್ತ ಡಾ| ಆನಂದ ಕಲ್ಲೋಳಿಕರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ದ. ಕ. ಮತ್ತು ಉಡುಪಿ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಮೊದಲಾದವರಿದ್ದರು.
ಪ್ಲಾಸ್ಟಿಕ್ ಮುಕ್ತ ನಗರಸಭೆ
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕೆ ಸುಮಿತ್ರಾ ಆರ್. ನಾಯಕ್, ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಒತ್ತುನೀಡಲಾಗುವುದು. ಪ್ಲಾಸ್ಟಿಕ್ ಮುಕ್ತ ನಗರಸಭೆ ಮಾಡುವ ಗುರಿ ಹೊಂದಲಾಗಿದೆ. ದಾರಿದೀಪ, ಸ್ವಚ್ಛತೆ, ನೀರಿನ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರ ಸಮಸ್ಯೆಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಸಾರ್ವಜನಿಕರ ಭೇಟಿಗೆ ಸಮಯ ನಿಗದಿಪಡಿಸಲಾಗುವುದು. ಯಾವುದೇ ಸನ್ಮಾನ ಸಮಾರಂಭಗಳಿಗೆ ಆಸ್ಪದ ನೀಡದೆ ತ್ವರಿತ ಗತಿಯಲ್ಲಿ ಮಾದರಿ ನಗರಸಭೆಯನ್ನಾಗಿ ರೂಪಿಸಲು ಯೋಜನೆ ಸಿದ್ಧಪಡಿಸಲಾಗುವುದು ಎಂದರು.