Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ರಾಜ್ಯೋತ್ಸವ ಪ್ರಶಸ್ತಿವಿಜೇತ ‘ಮದ್ದಲೆ ಮಾಂತ್ರಿಕ’ ಹಿರಿಯಡ್ಕ ಗೋಪಾಲ್ ರಾವ್ ಇನ್ನಿಲ್ಲ

ಉಡುಪಿ: ಯಕ್ಷಗಾನ ಕ್ಷೇತ್ರದ ಹಿರಿಯ ಮದ್ದಲೆ  ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ (101) ಶನಿವಾರ ರಾತ್ರಿ ನಿಧನರಾಗಿದ್ದಾರೆ.

1919ರ ಡಿಸೆಂಬರ್‌ 15ರಂದು ಉಡುಪಿಯ ಹಿರಿಯಡ್ಕದಲ್ಲಿ ಜನಿಸಿದ್ದ ಗೋಪಾಲ ರಾವ್ ಹಿರಿಯಡ್ಕ ಯಕ್ಷಗಾನ ಮೇಳದಲ್ಲಿ ಮದ್ದಲೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಡಗುತಿಟ್ಟಿನ ಏರು ಮದ್ದಲೆ ನುಡಿಸುವುದರಲ್ಲಿ ಪ್ರವೀಣರಾಗಿದ್ದ ರಾವ್  ಪರ್ಡೂರು ಮತ್ತು ಮಂದಾರ್ತಿ ಮೇಳದಲ್ಲಿ ಸಹ ಮದ್ದಲೆಗಾರರಾಗಿ ಸೇವೆ ಸಲ್ಲಿಸಿದ್ದರು.

ತಮ್ಮ ತಂದೆ ಶೇಷಗಿರಿ ರಾವ್ ಅವರಿಂದಲೇ ಮದ್ದಲೆಯನ್ನು ಕಲಿತಿದ್ದ ಗೋಪಾಲ್ ರಾವ್ ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ(2018), ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ಜಾನಪದ ಸಿರಿ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿ ಗೌರವಗಳು ಸಂದಿದೆ.

1939ರಿಂದ 67ರವರೆಗೆ ಮಂದರ್ತಿ ಮೇಳದಲ್ಲಿದ್ದ ಗೋಪಾಲ್ ರಾವ್ 1961ರಲ್ಲಿ ಶಿವರಾಮ ಕಾರಂತರ ಸಂಪರ್ಕಕ್ಕೆ ಬಂದರು. ಆ ನಂತರದಲ್ಲಿ ಗೋಪಾಲ್ ರಾವ್ ಕಾರಂತರ ಯಕ್ಷಗಾನ ಗೋಷ್ಟಿ ಹಾಗೂ ನೃತ್ಯಗಳಲ್ಲಿ ಮದ್ದಲೆಗಾರರಾಗಿ ದುಡಿದರು. 1968ರಲ್ಲಿ ಕಾರಂತರು ಬ್ರಹ್ಮಾವರದಲ್ಲಿ ಪ್ರಾರಂಭಿಸಿದ್ದ ಯಕ್ಷಗಾನ ಕೇಂದ್ರದಲ್ಲಿ ಅದ್ಯಾಪಕರಾಗಿ ಸೇರಿದ ಗೋಪಾಲ್ ರಾವ್ ಅದಾದ ಮುಂದಿನ ವರ್ಷ ಪೀಟರ್ ಕ್ಲಾಸ್ ಅವರೊಂದಿಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿದ್ದರು.1971ರಿಂದ ಐದು ವರ್ಷಗಳ ಕಾಲ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅದ್ಯಾಪಕರಾಗಿ ಸೇವೆ ಸಲ್ಲಿಸಿದ ರಾವ್ 1976ರಲ್ಲಿ ನಿವೃತ್ತರಾದರು. ರಾವ್ ಹಲವು ಬಾರಿ ವಿದೇಶದಲ್ಲಿ ಯಕ್ಷಗಾನ ಸಭೆ, ನೃತ್ಯ ಪ್ರದರ್ಶನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೆಹಲಿಯಲ್ಲಿ ಬಿವಿ ಕಾರಂತರೊಂದಿಗೆ ಸೇರಿ ಎನ್.ಎಸ್.ಡಿ.ಯಲ್ಲಿನ ಶಿಬಿರದಲ್ಲಿ ಸಹ ಭಾಗವಹಿಸಿದ್ದರು.

ಮೃತರ ಅಂತ್ಯ ಸಂಸ್ಕಾರ ಭಾನುವಾರ ನೆರವೇರುವುದೆಂದು ಕುಟುಂಬ ಮೂಲಗಳು ಹೇಳಿವೆ,

No Comments

Leave A Comment