Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ಮೈಸೂರು ದಸರಾ ಮಹೋತ್ಸವಕ್ಕೆ ಡಾ. ಸಿ.ಎನ್. ಮಂಜುನಾಥ್ ವಿದ್ಯುಕ್ತ ಚಾಲನೆ; ಖಾಸಗಿ ದರ್ಬಾರ್ ಆರಂಭ

ಮೈಸೂರು: ಕೊರೋನಾ ಆತಂಕದ ನಡುವೆಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಜಯದೇಯ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಖ್ಯಾತ ವೈದ್ಯ ಡಾ.ಸಿ.ಎನ್. ಮಂಜುನಾಥ್ ಅವರು ಶನಿವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಇದರಿಂದ ಸಾಂಸ್ಕೃತಿಕ ನಗರಿಯಲ್ಲಿ ದಸರಾ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದೆ.

ಇಂದು ಬೆಳಗ್ಗೆ 7.45 ರ ಶುಭ ಮುಹೂರ್ತದಲ್ಲಿ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ನವರಾತ್ರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಮೈಸೂರು ದಸರಾ ಮಹೋತ್ಸವ ಈ ನಾಡಿಗೆ ಅತ್ಯಂತ ಸಂಭ್ರಮದ ಹಾಗೂ ಗೌರವದ ಸಂಕೇತ. ಹಂಪಿಯ ಮಹಾನವಮಿ ದಿಬ್ಬದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಆಚರಿಸುತ್ತಿದ್ದ ದಸರಾ ಉತ್ಸವವನ್ನು ಮೈಸೂರಿನ ಅರಸರು ಮುಂದುವರಿಸಿದರು. ರಾಜಪ್ರಭುತ್ವದ ನಂತರ ಈ ಸಂಪ್ರದಾಯವನ್ನು ಕರ್ನಾಟಕ ಸರ್ಕಾರ ಆಚರಿಸಿಕೊಂಡು ಬಂದಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದು.

ನಾಡಿನ ಅಧಿದೇವತೆ ಎಂದು ಕರೆಯಲಾಗುವ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ತಾಯಿ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸಿ, ಈ ನಾಡಿಗೆ, ರಾಜ್ಯಕ್ಕೆ ಒಳಿತಾಗಲಿ, ದಸರಾ ಕೈಂಕಾರ್ಯಗಳು ನಿರ್ವಿಘ್ನವಾಗಿ ಸಾಗಲಿ ಎಂಬ ಪ್ರಾರ್ಥನೆಯೊಂದಿಗೆ ದಸರಾ ಮಹೋತ್ಸವವನ್ನು ಚಾಮುಂಡಿಬೆಟ್ಟದಲ್ಲಿ ಉದ್ಘಾಟಿಸುವುದು ಸಂಪ್ರದಾಯವಾಗಿದೆ ಎಂದರು.

ಮೈಸೂರು ದಸರಾ ವಿಶ್ವವಿಖ್ಯಾತಿಯಾದುದು. ದಸರಾ ಎಂದರೆ ಎಲ್ಲೆಡೆ ಸಂಭ್ರಮ- ವೈಭವ ಮನೆ ಮಾಡಿರುತ್ತದೆ. ಆದರೆ ಈ ಬಾರಿ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಬೇಕಾದ ಅನಿವಾರ್ಯತೆ ಬಂದಿದೆ. ಜಾಗತಿಕವಾಗಿ ಸಮಸ್ಯೆ ಉಂಟುಮಾಡಿರುವ ಕೊರೊನಾ ಸಾಂಕ್ರಾಮಿಕ ಸೋಂಕು ಹರಡುವುದನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ ಇರುವುದರಿಂದ ದಸರಾ ಮಹೋತ್ಸವದ ಹಲವಾರು ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸುತ್ತಿಲ್ಲ.

ಆದರೆ ದಸರಾ ಮಹೋತ್ಸವದ ಸಂಪ್ರದಾಯ ಮತ್ತು ಪರಂಪರೆಯನ್ನು ನಿಲ್ಲಿಸಬಾರದು ಎಂಬ ಉದ್ದೇಶದಿಂದ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿ ಚಾಮುಂಡಿಬೆಟ್ಟದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನಂದಿಧ್ವಜ ಪೂಜೆ ಹಾಗೂ ಜಂಬೂಸವಾರಿ ಕಾರ್ಯಕ್ರಮಗಳನ್ನು ಮಾತ್ರ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಪ್ರವಾಸೋದ್ಯಮಕ್ಕೆ, ವಾಣಿಜ್ಯ- ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡಬೇಕೆಂಬ ಅಭಿಪ್ರಾಯಗಳು ಹಲವರಿಂದ ವ್ಯಕ್ತವಾಗಿದ್ದವು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರವು ಕಾಲ ಕಾಲಕ್ಕೆ ನೀಡುವ ಕೋವಿಡ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಎಲ್ಲ ಜನಪ್ರತಿನಿಧಿಗಳ ಸಲಹೆ ಪಡೆದು ಈ ಬಾರಿಯ ದಸರಾ ಮಹೋತ್ಸವನ್ನು ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಸೀಮಿತಗೊಳಿಸಿ ಆಚರಿಸಲು ತೀರ್ಮಾನಿಸಲಾಯಿತು ಎಂದು ವಿವರಿಸಿದರು.

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಬಾರಿ ಕೊರೊನಾ ವಾರಿಯರ್ ಅವರಿಂದ ದಸರಾ ಉದ್ಘಾಟಿಸಬೇಕು ಹಾಗೂ ಕೊರೊನಾ ವಾರಿಯರ್ ಗಳಿಗೆ ಗೌರವಿಸಬೇಕು ಎಂದು ತೀರ್ಮಾನಿಸಲಾಯಿತು.

ಅದರಂತೆ ಖ್ಯಾತ ವೈದ್ಯರು ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಲಾಯಿತು. ಅವರು ಸಂತೋಷದಿಂದ ಒಪ್ಪಿಕೊಂಡು ಬಂದಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೊರೋನಾ ನಿಯಂತ್ರಣದಲ್ಲಿ ಶ್ರಮಿಸಿದ ಇನ್ನಿತರ ವಾರಿಯರ್ಸ್ ಗಳೆಂದರೆ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆ, ಪೌರಕಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅವರಿಗೂ ಸಹ ಗೌರವವನ್ನು ಸಲ್ಲಿಸುವ ಕಾರ್ಯ ನಮ್ಮಿಂದಾಗಬೇಕು.

ಈ ಹಿನ್ನೆಲೆಯಲ್ಲಿ ಅವರಿಗೆ ಇಂಥ ಒಂದು ದಸರಾ ಸುಸಂದರ್ಭದಲ್ಲಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸುವ ಕೆಲಸವನ್ನು ನಾವು ಸರ್ಕಾರದ ವತಿಯಿಂದ ಮಾಡುತ್ತಿದ್ದೇವೆ ಎಂದರು. ಹೀಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್ ನರ್ಸ್ ಪಿ.ಎಂ.ರುಕ್ಮಿಣಿ, ಆಶಾ ಕಾರ್ಯಕರ್ತೆ ನೂರ್ ಜಾನ್, ಮೈಸೂರು ಸ್ವಚ್ಛನಗರಿಯಾಗಲು ಪ್ರಮುಖ ಕಾರಣಕರ್ತರಾದ ಪೌರಕಾರ್ಮಿಕರಾದ ಮರಗಮ್ಮ, ಇನ್ನು ತಮ್ಮವರ ಮೃತ ದೇಹಗಳನ್ನೇ ಮುಟ್ಟಲು ಹಿಂದೆ – ಮುಂದೆ ನೋಡುವ ಈ ಕಾಲಘಟ್ಟದಲ್ಲಿ ಸಾವಿರಾರು ಮೃತದೇಹಗಳನ್ನು ವ್ಯವಸ್ಥಿತವಾಗಿ ಅಂತ್ಯಕ್ರಿಯೆ ಮಾಡಿದ ಸಾಮಾಜಿಕ ಕಾರ್ಯಕರ್ತ ಆಯೂಬ್ ಅಹಮದ್, ನಾವೆಲ್ಲ ನೆಮ್ಮದಿಯಾಗಿರಲು ಕಾರಣಕರ್ತರಾದ ಆರಕ್ಷಕರ ಪ್ರತಿನಿಧಿಯಾಗಿರುವ ಪೊಲೀಸ್ ಕಾನ್ಸಟೇಬಲ್ ಕುಮಾರ್ ಪಿ. ಹಾಗೂ ವೈದ್ಯೋ ನಾರಾಯಣೋ ಹರಿ ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದ ವೈದ್ಯ ದೇವರುಗಳ ಪ್ರತಿನಿಧಿ ಡಾ. ನವೀನ್ ಟಿ.ಆರ್ ಅವರನ್ನು ಸನ್ಮಾನಿಸಲಾಗುತ್ತಿದ್ದು, ಇವರನ್ನು ಆಯಾ ವಿಭಾಗದ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿ ಈ ಮೂಲಕ ಎಲ್ಲರಿಗೂ ಗೌರವವನ್ನು ಸಮರ್ಪಣೆ ಮಾಡುತ್ತಿದ್ದೇವೆ. ಇದು ನನಗೆ ಅತೀವ ಖುಷಿಯನ್ನು ಕೊಟ್ಟಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುರಕ್ಷಿತ ದಸರಾ ಆಚರಿಸುವ ಸಲುವಾಗಿ ಕೋವಿಡ್ ರಾಜ್ಯಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರನ್ನು ಒಳಗೊಂಡ ತಾಂತ್ರಿಕ ಸಲಹಾ ಸಮಿತಿಯನ್ನು ಮೈಸೂರಿಗೆ ಕಳುಹಿಸಲಾಗಿತ್ತು. ಈ ಸಮಿತಿ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಹಾಗೂ ಸಲಹೆಗಳನ್ವಯ ಈಗ ದಸರಾವನ್ನು ಆಚರಿಸಲಾಗುತ್ತಿದೆ.

ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ನಡೆಯುವ ಈ ಬಾರಿಯ ದಸರಾ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಪ್ರಸಾರ ಮಾಡಲಾಗುತ್ತಿದ್ದು, ಸಾರ್ವಜನಿಕರು ಟಿ.ವಿ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ನೇರಪ್ರಸಾರ ವೀಕ್ಷಿಸಲು ಕೋರಿದೆ. ಹೆಚ್ಚಿನ ಜನಸಂದಣಿ ಸೇರಬಾರದು ಎಂಬ ಉದ್ದೇಶದಿಂದ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ಸಹ ನಿರ್ಬಂಧಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ನಮಗೆ ಅತಿಮುಖ್ಯ ಎಂದು ಸೋಮಶೇಖರ್ ಹೇಳಿದರು.

ಸಾರ್ವಜನಿಕರು ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಸರ್ ಬಳಸಿ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಹೊರಗಡೆ ಓಡಾಡದೆ ಮನೆಯಲ್ಲೇ ಇದ್ದು ದಸರಾ ಆಚರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಖಾಸಗಿ ದರ್ಬಾರ್ ಆರಂಭಿಸಿದ ಯದುವೀರ್

ಸರಳವಾದರೂ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರ ಕಂಕಣಧಾರಿಯಾಗಿ ಖಾಸಗಿ ದರ್ಬಾರ್ ಆರಂಭಿಸಿದರು.

ಬೆಳಿಗ್ಗೆ 7:45 ರಿಂದ 8:15 ನಿಮಿಷದೊಳಗೆ ಸಲ್ಲುವ ಶುಭ ಲಗ್ನದಲ್ಲಿ ಯದುವೀರ್ ಸಿಂಹಾಸನಾರೋಹಣ ನಡೆಯಿತು .ಯದುವೀರ್ ಸಿಂಹಾಸನಾರೋಹಣ ಮಾಡುವ ಮೂಲಕ, ಇಂದಿನಿಂದ 9 ದಿನಗಳ ಕಾಲ ನಡೆಯುವ ಖಾಸಗಿ ದರ್ಬಾರ್ ಆರಂಭವಾಗಿದೆ.

ಸಂಜೆ ಅರಮನೆಯಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.ಶರನ್ನವರಾತ್ರಿ ಶುಭಾಶಯ ಕೋರಿದ್ದಾರೆ.

ನಾಡಿನ ಸಮಸ್ತ ಜನತೆಗೆ ಶರನ್ನವರಾತ್ರಿ ಶುಭ ಪರ್ವದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಚಾಮುಂಡೇಶ್ವರಿ ದೇವಿ ನಮಗೆದುರಾಗಿರುವ ಎಲ್ಲ ಸಂಕಷ್ಟಗಳನ್ನು ದೂರ ಮಾಡಿ ನಾಡಿನ ಜನತೆಗೆ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅವರು ಶುಭಾಶಯ ಹಂಚಿಕೊಂಡಿದ್ದಾರೆ.

No Comments

Leave A Comment