ಮುಂಬೈ: ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಎನ್ ಸಿಪಿ ಮುಖಂಡ ಜೀವಂತ ದಹನ
ಮುಂಬೈ:ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ಎನ್ ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ) ಮುಖಂಡ ಸಂಜಯ್ ಶಿಂದೆ(55ವರ್ಷ) ಜೀವಂತವಾಗಿ ದಹನವಾಗಿರುವ ದಾರುಣ ಘಟನೆ ಮುಂಬೈನ ನಾಸಿಕ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆ ಪಿಂಪಾಲ್ ಗಾಂವ್ ಬಸ್ವಂತ್ ಟೋಲ್ ಪ್ಲಾಝಾ ಸಮೀಪ ಸಂಭವಿಸಿದೆ. ಕೀಟನಾಶಕ ಖರೀದಿಸಿ ವಾಪಸ್ ಆಗುತ್ತಿದ್ದ ವೇಳೆ ಮುಂಬೈ-ಆಗ್ರಾದ ಪಿಂಪಾಲ್ ಗಾಂವ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ದುರಂತ ಸಂಭವಿಸಿದೆ ಎಂದು ವಿವರಿಸಿದ್ದಾರೆ.
ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಶಿಂದೆ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಅಲ್ಲದೇ ಕಾರಿನಿಂದ ಹೊರ ಬರಲು ಪ್ರಯತ್ನಿಸಿದಾಗ ಬಾಗಿಲು ಲಾಕ್ ಆಗಿತ್ತು. ಅಲ್ಲದೇ ಕಾರಿನ ಗಾಜನ್ನು ಒಡೆದು ಹೊರಬರಲು ಯತ್ನಿಸಿದ್ದರು, ಆದರೆ ಅದೂ ಸಾಧ್ಯವಾಗಲಿಲ್ಲ. ಬೆಂಕಿ ಒಳಗೆ ಆವರಿಸಿದ್ದರಿಂದ ಶಿಂದೆ ಜೀವಂತವಾಗಿ ಸುಟ್ಟು ಹೋಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನೊಳಗೆ ಸ್ಯಾನಿಟೈಸರ್ ಬಾಟಲಿ ಸಿಕ್ಕಿದ್ದು, ಕಾರಿನೊಳಗೆ ಬೆಂಕಿ ಕೂಡಲೇ ಹೊತ್ತಿಕೊಳ್ಳಲು ಇದೇ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿಯನ್ನು ನಂದಿಸಿ, ಶಿಂದೆ ಅವರನ್ನು ಹೊರತೆಗೆಯಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಪಿಂಪಾಲ್ ಗಾಂವ್ ಬಸ್ವಾಂತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಹೇಳಿದೆ.