Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಉತ್ತರ ಕರ್ನಾಟಕದಲ್ಲಿ ಕುಂಭ ದ್ರೋಣ ಮಳೆ – ನೆಲ ಕಚ್ಚಿದ ರೈತನ ಬೆಳೆ, ಪ್ರವಾಹ ಪರಿಸ್ಥಿತಿ

ಬೆಂಗಳೂರು: ವಿಜಯಪುರ, ಕಲುಬುರಗಿ, ಕರಾವಳಿ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಾದ ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಸತತ ಮಳೆಯಿಂದ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿ ಜನರು ಭಯಭೀತರಾಗಿದ್ದಾರೆ. ಕೆಲವರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ನೀರು ಹೊರಹಾಕಲು ಹೈರಾಣರಾಗಿದ್ದಾರೆ.

ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿನ ಕಬ್ಬು, ಸೋಯಾಬೀನ್, ಹತ್ತಿ, ಮೆಕ್ಕೆಜೋಳ ನೆಲ ಕಚ್ಚಿದ್ದು, ಕೆಲವು ಜಿಲ್ಲೆಗಳಲ್ಲಿ ಅಡಕೆ ಬೆಳೆಗೂ ಹಾನಿಯಾಗಿದೆ. ನೂರಾರು ಜನ ಮನೆ ಮಠ ಕಳೆದುಕೊಂಡು, ಅಕ್ಷರಶಃ ಬೀದಿಗೆ ಬಂದಿದ್ದಾರೆ. ಮಳೆ ಸಂತ್ರಸ್ತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೆ ಧಾವಿಸಬೇಕಾಗಿದೆ.

ಕೂಡಲೇ ಉತ್ತರಕರ್ನಾಟಕ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕಎಸ್.ಆರ್.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಜಯಪುರ, ಬಾಗಿಲುಕೋಟೆ, ಕಲುಬುರ್ಗಿ, ಬೀದರ್, ಯಾದಗಿರಿ, ರಾಯಚೂರಿನ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಜನತೆ ಎಚ್ಚರದಿಂದ ಇರಬೇಕೆಂದು ಸೂಚಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಸದವತ್ತಿ, ಬೈಲಹೊಂಗಲ, ಚಿಕ್ಕೋಡಿ, ಅಥಣಿಯಲ್ಲಿ ಭಾರೀ ಮಳೆಯಾಗಿದ್ದು, ಸಾವಿರಾರುಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು, ಸೋಯಾಬೀನ್, ಹತ್ತಿ, ಮೆಕ್ಕೆಜೋಳ ಮಳೆಯಿಂದ ಹಾನಿಯಾಗಿದ್ದು, ರೈತರು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಧಾರುಣ ಪರಿಸ್ಥಿತಿ ಎದುರಾಗಿದೆ.

ಈ ನಡುವೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 12 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕೃಷ್ಣ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ವಿಜಯಪುರ ಜಿಲ್ಲೆಯಲ್ಲೂ ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಎಲ್ಲ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಧೋಣಿ ನದಿ ಪ್ರವಾಹ ಮುಂದುವರಿದಿದ್ದು, ಇದರ ಪರಿಣಾಮವಾಗಿ ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ತಾಲೂಕುಗಳ ನಡುವೆ ಸಂಪೂರ್ಣಕಡಿದು ಹೋಗಿದೆ. ತಾಳಿಕೋಟೆ ಸೇತುವೆ ಸಂಪೂರ್ಣಜಲಾವೃತಗೊಂಡಿದೆ. ಸೇತುವೆ ಮುಳುಗಡೆಯಾಗಿರುವ ಕಾರಣ, ಹಡಗಿನಾಳ, ಶಿವಪುರ, ಕಲ್ಲದೇವನಹಳ್ಳಿ, ಮೂಕಿನಾಳ ಗ್ರಾಮಗಳ ಸಂಪರ್ಕಕ ಡಿದುಹೋಗಿದೆ.

ರಾಯಚೂರು ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿನ ಭತ್ತ ನೆಲ ಕಚ್ಚಿದೆ. ಕೋಟ್ಯಂತರರೂಪಾಯಿ ನಷ್ಟ ಸಂಭವಿಸಿದೆ. ಇನ್ನೂ ಕರಾವಳಿ ಜಿಲ್ಲೆಗಳಲ್ಲೂ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಜನಜೀವನ ಬಾಧಿತಗೊಂಡಿದೆ.

ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳಲ್ಲಿ ಅನೇಕ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಅನೇಕ ಕಡೆ ವಿದ್ಯುತ್ ಸಂಪರ್ಕಕಡಿತವಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಸುರಿದಧಾರಾಕಾರ ಮಳೆಯಿಂದ ಕಾರಿಂಗೇಶ್ವರ ದೇವಸ್ಥಾನದತಡೆಗೋಡೆ ಕುಸಿದು ಬಿದ್ದಿದೆ. ಆದರೆ, ದೇವಾಲಯಕ್ಕೆಯಾವುದೇ ಹಾನಿಯಾಗಿಲ್ಲ.

ಕಲಬುರಗಿ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಕಾಗೀಣಾ, ಮುಲ್ಲಾಮಾರಿ, ಭೀಮಾ ನದಿಗಳು ತುಂಬಿ ಹರಿಯುತ್ತಿವೆ. ಅಲ್ಲದೆ, ನಗರ ಮತ್ತು ಪಟ್ಟಣದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ದವಸ ಧಾನ್ಯ ಸೇರಿದಂತೆ ಹಲವು ವಸ್ತುಗಳು ಹಾನಿಗೊಳಗಾಗಿವೆ. ಸೇತುವೆ, ರಸ್ತೆಗಳು ಜಲಾವೃತಗೊಂಡು ಸೇತುವೆಗಳು ಮಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಸೇಡಂ ತಾಲೂಕಿನ ಕಾಗೀಣಾ ನದಿಗೆ ಅಡ್ಡಲಾಗಿರುವ ಮಳಖೇಡ ಸೇತುವೆ, ಕಾಚೂರು, ದಂಡೋತಿ ಸೇತುವೆ ಮುಳುಗಡೆ ಆಗಿವೆ. ಮಳಖೇಡದ ಉತ್ತರಾದಿ ಮಠ ಸಂಪೂರ್ಣ ಜಲಾವೃತವಾಗಿದೆ. ಭಕ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಚಿಂಚೋಳಿ ಪಟ್ಟಣದ ಹರಿಜನವಾಡಾ, ಮೊಮಿನಪುರ ಸೇರಿದಂತೆ ಅನೇಕ ಬಡಾವಣೆಗಳು ಜಲಾವೃತಗೊಂಡಿದ್ದು, ಬೆನಕನಳ್ಳಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಇಡೀ ಜನರು ಎಚ್ಚರದಿಂದ ಇದ್ದು ಜೀವ ಉಳಿಸಿಕೊಂಡಿದ್ದಾರೆ. ಮುಲ್ಲಾಮಾರಿ ನದಿಗೆ ನೀರು ಉಕ್ಕಿ ಬಂದ ಪರಿಣಾಮ ಅನಾಹುತ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಳಗಿ ತಾಲ್ಲೂಕಿನ ಹೆಬ್ಬಾಳದಲ್ಲೂ ಮನೆಗಳಿಗೆ ನುಗ್ಗಿದ ನೀರಿನಿಂದಾಗಿ ರಾತ್ರಿಯೆಲ್ಲ ಜನರ ಪರದಾಟ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಮಳೆ ನೀರಿಲ್ಲಿ ನೆನೆದು ಸಂಪೂರ್ಣ ಹಾಳಾಗಿವೆ. ಅದೃಷ್ಟವಶಾತ್ ಜೀವ, ಜಾನುವಾರು ಹಾನಿ ಸಂಭವಿಸಿಲ್ಲ. ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿ ಇಡೀ ಜಾಗ್ರಣೆ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ. ಪೂಜಾ ಕಾಲೋನಿ, ಶಹಾಬಾದ ರಿಂಗ ರಸ್ತೆಯಲ್ಲಿನ ಮನೆಗಳು, ಮೊಮಿನಪುರ,ಡಾಕ್ಟರ್ ಕಾಲೊನಿ, ಜಯನಗರ, ಪ್ರಶಾಂತ ನಗರ(ಎ-ಬಿ), ಶಹಾಬಾದ ರಿಂಗ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಮನೆಗಳಿಗೆ ನೀರು ನುಗ್ಗಿ ಜನರು ಭಯಭೀತರಾಗಿದ್ದಾರೆ. ಗಾರ್ಡನ್ ಗಳಿಗೆ ನೀರು ನುಗ್ಗಿದೆ.

ಅಲ್ಲದೆ, ರಾತ್ರಿ ಇಡೀ ಮಳೆ ಸುರಿಯುತ್ತಿರುವುದರಿಂದ ಜನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ತಡರಾತ್ರಿಯಿಂದ ಬುಧವಾರದ ಬೆಳಗಿನ ಜಾವದವರೆಗೂ ಮಳೆ ಸುರಿಯುತ್ತಿದೆ. ಹಾಲು, ಪೇಪರು,ಪತ್ರಿಕೆ ವಿತರಣೆ ಮಾಡುವ ಹುಡುಗರದ್ದು ಸವಾಲಿನ ಕೆಲಸವಾಗಿದೆ.

No Comments

Leave A Comment