ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ ನಿಧನ ಹಿರಿಯ ಚಿತ್ರನಿರ್ದೇಶಕ ನಾಗೇಶ್ ಬಾಬ ವಿಧಿವಶರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು ಮಂಗಳವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮಂಡ್ಯ ಜಿಲ್ಲೆ ಬೆಳಕವಾಡಿಯವರಾದ ನಾಗೇಶ್, ಬೆಂಗಳೂರಿನಲ್ಲಿ ಬಿಎಸ್ಸಿ ಪದವಿ ಮುಗಿಸಿದ ನಂತರ ಚಿತ್ರರಂಗದತ್ತ ಆಕರ್ಷಿತರಾದರು. ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957) ಚಿತ್ರದ ಸಹಾಯಕ ನಿರ್ದೇಶಕರಾಗಿ ಅವರ ಚಿತ್ರರಂಗದ ನಂಟು ಆರಂಭವಾಯ್ತು. ‘ಬೆಟ್ಟದ ಕಳ್ಳ’, ‘ಪ್ರತಿಮಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಾಗೇಶ್ ಬಾಬ ಅವರು ‘ಕೋಟಿ ಚೆನ್ನಯ’ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದಾರೆ. ‘ತೂಗುದೀಪ’, ‘ನನ್ನ ಕರ್ತವ್ಯ’ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ. ‘ಅನಿರೀಕ್ಷಿತ’ (1970) ಅವರು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾ. ಕೃಷ್ಣಮೂರ್ತಿ ಪುರಾಣಿಕರ ‘ವಸುಂಧರೆ’ ಕೃತಿಯನ್ನು ಆಧರಿಸಿದ ಪ್ರಯೋಗವಿದು. ಚಿತ್ರಕ್ಕೆ ವಿಜಯಭಾಸ್ಕರ್ ಸಂಯೋಜಿಸಿದ ಎರಡು ಟ್ಯೂನ್ಗಳಿಗೆ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಮದರಾಸಿಗೆ ತೆರಳಿ ಗೀತೆ ರಚಿಸಿಕೊಟ್ಟಿದ್ದು ವಿಶೇಷ. ಈ ಸಿನಿಮಾ ತೆರೆಕಂಡು ಈ ಹೊತ್ತಿಗೆ ಐವತ್ತು ವರ್ಷ ಮದರಾಸಿನಲ್ಲಿದ್ದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೂಪರಿಂಟೆಂಡ್ ಆಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದ ನಾಗೇಶ್ ಬಾಬು ಕನ್ನಡ ಚಿತ್ರೋದ್ಯಮದ ಸ್ಥಿರಚಿತ್ರ ವಿಭಾಗಕ್ಕೆ ನೀಡಿದ ಕೊಡುಗೆ ಮಹತ್ವದ್ದಾಗಿದೆ. Share this:TweetWhatsAppEmailPrintTelegram