ಕಟ್ಟಡ ಕಾರ್ಮಿಕರ ಹೆಸರಿನಲ್ಲಿ 44,95,000ಮೊತ್ತದ ಆಹಾರ ಕಿಟ್ ಬಿಡುಗಡೆ ನ್ಯಾಯಯುತವಾಗಿ ವಿತರಿಸಲಾಗಿಲ್ಲ-ಕಾರ್ಕಳ ಶಾಸಕ ರಾಜೀನಾಮೆಗೆ ಒತ್ತಾಯ ಉಡುಪಿ: ಲಾಕ್ ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ವಂಚಿಸಿ, ತನ್ನದೇ ಸರ್ಕಾರಕ್ಕೆ ಆಹಾರ ಕಿಟ್ ವಿತರಣೆಯ ಬೋಗಸ್ ಪಟ್ಟಿ ಸಲ್ಲಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ಕೊಡಬೇಕು ಎಂದು ಪುರಸಭಾ ಸದಸ್ಯರು, ಕಾರ್ಕಳ ಶುಭದ ರಾವ್ ಒತ್ತಾಯಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಕಳಕ್ಕೆ 5000 ಸಾವಿರ ಆಹಾರ ಕಿಟ್ಟನ್ನು ವಿತರಿಸಲು ರೂ. 44,95,000 ಬಿಡುಗಡೆ ಮಾಡಿದ್ದು, ಈ ಆಹಾರ ಕಿಟ್ನ್ನು ನ್ಯಾಯಯುತವಾಗಿ ವಿತರಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಮಾಹಿತಿ ಹಕ್ಕಿನ ಮೂಲಕ ಪಡೆದು ಪರಿಶೀಲಿಸಿದಾಗ ಇದೊಂದು ಬೋಗಸ್ ಪಟ್ಟಿಯೆಂದೂ ಮತ್ತು ಈ ಬೋಗಸ್ ಪಟ್ಟಿಯ ಮೂಲಕ ಅವ್ಯವಹಾರ ನಡೆಸಿದ ಸರ್ಕಾರಕ್ಕೆ ಮತ್ತು ಜನತೆಗೆ ವಂಚಿಸಲಾಗಿದೆ ಎಂದು ಕಂಡು ಬರುತ್ತದೆ. ಪಟ್ಟಿಯಲ್ಲಿ ಕಿಟ್ಟನ್ನು ಪಡೆಯದೆ ಇದ್ದವರಿಗೆ ಇನ್ನಾವುದೋ ಬೇರೆ ಯೋಜನೆಯ ಫಲಾನುಭವಿಗಳು ಮತ್ತು ಅದಕ್ಕಿಂತಲೂ ಮಿಗಿಲಾಗಿ ಮೃತಪಟ್ಟವರ ಹೆಸರು ಇರುವುದು ಕಂಡು ಬಂದಿದ್ದರಿಂದ ಅದು ಬೋಗಸ್ ಪಟ್ಟಿ ಎನ್ನುವುದಕ್ಕೆ ಬಲವಾದ ಸಾಕ್ಷಿಯಾಗಿದೆ. ಬಡವರ ಹೆಸರಿನಲ್ಲಿ ಊರಿನ ದಾನಿಗಳಿಂದ ಹಣ ಸಂಗ್ರಹ ಮಾಡಿದ್ದ ಶಾಸಕರು ಆ ಹಣದಲ್ಲಿ ಸುಮಾರು 350 ರೂ.ಗಳ ಸಣ್ಣ ಸಣ್ಣ ಆಹಾರ ಕಿಟ್ಗಳನ್ನು ಚಿನ್ನದ ಕೆಲಸಗಾರರು, ಕ್ಷೌರಿಕರು. ಮಡಿವಾಳರು, ರಿಕ್ಷಾ ಚಾಲಕ-ಮಾಲಕರು, ಬಸ್ ಸಿಬ್ಬಂದಿಗಳು ಮತ್ತು ಇತರರಿಗೆ ವಿತರಿಸಿದ್ದಾರೆ. ಅಲ್ಲದೇ, ಅವರ ಹೆಸರನ್ನೇ ಕಾರ್ಮಿಕ ಇಲಾಖೆಗೆ ಸುಳ್ಳು ಮಾಹಿತಿ ಕಳುಹಿಸಿ, ಇವರೆಲ್ಲರಿಗೂ 899 ರೂ. ಇಲಾಖೆ ಪೆಟ್ಟನ್ನೇ ನೀಡಲಾಗಿದ್ದು, ಬಡ ಕಾರ್ಮಿಕರಿಗೆ ಮತ್ತು ಇಲಾಖೆಗೆ ವಂಚಿಸಲಾಗಿದೆ ಎಂದು ಶುಭದ ರಾವ್ ಆರೋಪಿಸಿದ್ದಾರೆ. ಆಹಾರ ಕಿಟ್ ವಿತರಿಸಲು ಕರೆಯಲಾಗಿದ್ದ ಕೋಟೇಷನ್ ಕೂಡ ನಕಲಿ ಮತ್ತು ಬೋಗಸ್ ಎಂದು ದಾಖಲೆಯಿಂದ ತಿಳಿದು ಬಂದಿದೆ. ಪಕ್ಷದ ಪದಾಧಿಕಾರಿಗಳಿಂದಲೇ ಕೊಟೇಶನ್ ಹಾಕಿ ಅವರನ್ನು ಬಲಿಪಶು ಮಾಡುವ ಮೂಲಕ ಸರಕಾರದ ಹಣವನ್ನು ಬಡವರ ಹೆಸರಲ್ಲಿ ಲೂಟಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಕಿಟ್ ವಿತರಿಸಿದ ಏಜೆನ್ಸಿ ಅವರ ಬ್ಯಾಂಕ್ ಖಾತೆಗೆ ಕಾರ್ಮಿಕ ಇಲಾಖೆಯಿಂದ ನೇರವಾಗಿ ಹಣ ಪಾವತಿಯಾಗಿಲ್ಲ. ಆ ಏಜೆನ್ಸಿಯ ಅದೇ ಖಾತೆಯಿಂದ ಪಕ್ಷದ ಪದಾಧಿಕಾರಿ ಅವರ ಬ್ಯಾಂಕ್ ಖಾತೆಗಳಿಗೆ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿರುವುದು ಕಿಟ್ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿಯಾಗಿರುವುದು ಕಂಡುಬರುತ್ತದೆ ಎಂದಿದ್ದಾರೆ. ನಂಬಿಕೆಯಿಟ್ಟು ಆರಿಸಿ ಕಳಿಸಿದ ಮತದಾರರ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿರುವುದು ನಿಜಕ್ಕೂ ದುರಂತ, ಈ ಫಲಾನುಭವಿಗಳ ಪಟ್ಟಿ ಬೋಗಸ್ ಅಲ್ಲವೆಂದು ಸಾಬೀತುಪಡಿಸುವಂತೆ ಶಾಸಕ ಕಾರ್ಕಳ ಜನತೆಯ ಪರವಾಗಿ ಸವಾಲು ಹಾಕಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸುತ್ತೇನೆ. ಅಸಾಧ್ಯವಾದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ. Share this:TweetWhatsAppEmailPrintTelegram