Log In
BREAKING NEWS >
ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಡಿ ಕೆ ಬ್ರದರ್ಸ್ ಮೇಲೆ ಸಿಬಿ’ಐ’: ದಾಳಿ ವೇಳೆ 50 ಲಕ್ಷ ನಗದು ವಶ, ರಾಜಕೀಯ ಷಡ್ಯಂತ್ರ ಎಂದು ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಕೇಂದ್ರ ತನಿಖಾ ದಳ(ಸಿಬಿಐ) ಸೋಮವಾರ ಬೆಳ್ಳಂಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಸಂಸದ ಡಿ ಕೆ ಸುರೇಶ್ ಅವರಿಗೆ ಸೇರಿದ 14 ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿ ತನಿಖೆ ವೇಳೆ ಸುಮಾರು 50 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಬಿಐ ಅಧಿಕಾರಿಗಳು ರಾಮನಗರ, ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ 14 ಕಡೆಗಳಲ್ಲಿ ದಾಳಿ ನಡೆಸಿದ್ದು ತೀವ್ರವಾದ ತನಿಖೆ ಮುಂದುವರಿಸುತ್ತಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿ ಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿ ನಂತರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ವಕ್ತಾರ ಸೂರಜ್ ಅರಸ್, ಮುಂಬರುವ ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿವಕುಮಾರ್ ಮನೆಯಲ್ಲಿ ಚುನಾವಣೆ ಸಿದ್ಧತೆ ಸಂಬಂಧ ಇಂದು ಸಭೆ ನಡೆಸುವ ತಯಾರಿಯಲ್ಲಿದ್ದರು. ಆ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರು.

ಏಕಾಏಕಿ 60ಕ್ಕೂ ಹೆಚ್ಚು ಅಧಿಕಾರಿಗಳು 14 ಕಡೆ  ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಹೇಳಿದರು.

ಉಪ ಚುನಾವಣೆ ಹೊಸ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದಿರುವುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.

ರಂದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿ, ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳು ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಮೋದಿ ಮತ್ತು ಬಿ ಎಸ್ ಯಡಿಯೂರಪ್ಪನವರು ಸಿಬಿಐ ಅಧಿಕಾರಿಗಳನ್ನು ತಮ್ಮ ಕೈಗೊಂಬೆಗಳಂತೆ ಕುಣಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸುವ ಮೂಲಕ ಅವರ ಉದ್ದೇಶವೆಲ್ಲವೂ ಈಡೇರುತ್ತದೆ ಎಂದು ಅಂದುಕೊಂಡಿದ್ದರೆ ಅದು ಭ್ರಮೆಯಷ್ಟೆ ಎಂದಿದ್ದಾರೆ.

No Comments

Leave A Comment