ಹೊಸಪೇಟೆ: ಕಾಲು ಜಾರಿ ಕಾಲುವೆಗೆ ಬಿದ್ದ ಯುವಕರು ನೀರುಪಾಲು!
ಹೊಸಪೇಟೆ: ಬಾಟಲಿಗೆ ನೀರು ತುಂಬಿಸಿಕೊಳ್ಳಲು ಕಾಲುವೆಗೆ ಇಳಿದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.
ಹೊಸಪೇಟೆಯ ತುಂಗಭದ್ರ ಆರ್.ಬಿ ಎಚ್.ಎಲ್.ಸಿ ಕಾಲುವೆಯಲ್ಲಿ ಬಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಮೃತ ಯುವಕರನ್ನು ಸಂಡೂರಿನ ಕಿರಣ್ (23) ಮತ್ತು ಅಬ್ದುಲ್ಲಾ (23)ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಹೊಸಪೇಟೆಯಿಂದ ಸಂಡೂರಿಗೆ ಹಿಂತಿರುಗುವಾಗ ಕಾಲುವೆಗೆ ಇಳಿದು ಬಾಟಲಿಗೆ ನೀರು ತುಂಬಿಕೊಳ್ಳಲು ಹೋದ ಕಿರಣ್, ಅಲ್ಲಿಯೇ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಈ ವೇಳೆ ಸ್ನೇಹಿತನ ರಕ್ಷಣೆಗೆ ಮುಂದಾದ ಅಬ್ದುಲ್ಲಾ ಸಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಈ ಸಂಬಂದ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಮೃತರ ಶವ ಹುಡುಕಾಟ ನಡೆದಿದೆ.