Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸ೦ಭ್ರಮದ ಲಕ್ಷದೀಪೋತ್ಸವ... ........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಹಿಮಾಚಲ ಪ್ರದೇಶ: ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್ ಸುರಂಗ ಪ್ರಧಾನಿ ನರೇಂದ್ರ ಮೋದಿಯಿಂದ ಲೋಕಾರ್ಪಣೆ

ರೋಹ್ಟಾಂಗ್ (ಹಿಮಾಚಲ ಪ್ರದೇಶ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ 9.02 ಕಿಲೋ ಮೀಟರ್ ಉದ್ದದ ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಅಟಲ್ ಸುರಂಗ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ.

ಈ ಸುರಂಗ ಮಾರ್ಗ ಮನಾಲಿಯಿಂದ ಲೇಹ್-ಸ್ಟಿತಿ ಕಣಿವೆಯನ್ನು ಸಂಪರ್ಕಿಸುತ್ತಿದ್ದು, ಇದು ವಿಶ್ವದ ಅತ್ಯಂತ ಉದ್ದ ಹೆದ್ದಾರಿ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದೆ.

ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕರಿಗೆ ಮನಾಲಿ ಮತ್ತು ಲೇಹ್ ಮಧ್ಯೆ 46 ಕಿಲೋ ಮೀಟರ್ ದೂರದ 5 ಗಂಟೆಗಳ ಪ್ರಯಾಣ ಕಡಿತವಾಗಲಿದೆ.

ಹೆದ್ದಾರಿ ಸುರಂಗ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಗಡಿಭಾಗದ ಮೂಲ ಸೌಕರ್ಯಕ್ಕೆ ಅಟಲ್ ಸುರಂಗ ಹೊಸ ಶಕ್ತಿಯನ್ನು ನೀಡಲಿದೆ. ವಿಶ್ವದರ್ಜೆಯ ಗುಣಮಟ್ಟದ ಗಡಿ ಸಂಪರ್ಕಕ್ಕೆ ಇದು ಉತ್ತಮ ಉದಾಹರಣೆ. ಗಡಿಭಾಗದ ಮೂಲಸೌಕರ್ಯಗಳನ್ನು ಹೆಚ್ಚಿಸಲು ದೀರ್ಘಕಾಲದಿಂದ ಬೇಡಿಕೆಯಿತ್ತು, ಆದರೆ ಯೋಜನೆ ಸಾಕಾರಗೊಳ್ಳುತ್ತಿರಲಿಲ್ಲ, ಮಧ್ಯದಲ್ಲಿಯೇ ಕೆಲಸ ನಿಂತುಹೋಗುತ್ತಿತ್ತು, ಇದೀಗ ಅಟಲ್ ಸುರಂಗ ಹೆದ್ದಾರಿ ಸಾಕಾರಗೊಂಡಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಗಡಿಭಾಗಗಳಲ್ಲಿ ಸಂಪರ್ಕ ಸೌಕರ್ಯ ಹೆಚ್ಚಿದರೆ ಅದರಿಂದ ದೇಶದ ಭದ್ರತೆ ಹೆಚ್ಚಾಗುತ್ತದೆ. ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಈ ಸುರಂಗ ಹೆದ್ದಾರಿಗೆ 2002ರಲ್ಲಿಯೇ ಶಂಕು ಸ್ಥಾಪನೆ ನೆರವೇರಿಸಿದ್ದರು. 2013-14ರವರೆಗೆ ಸುರಂಗದ 1,300 ಮೀಟರ್ ವರೆಗೆ ಮಾತ್ರ ನಿರ್ಮಾಣದ ಪ್ರಗತಿ ಸಾಗಿತ್ತು. 2014ರ ನಂತರ ಸುರಂಗ ಹೆದ್ದಾರಿಯ ಯೋಜನೆ ತ್ವರಿತವಾಗಿ ಸಾಗಿ ಇದೀಗ ಉದ್ಘಾಟನೆಯಾಗಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.

ಗಡಿಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದರ ಪ್ರಯೋಜನ ನಮ್ಮ ಸೇನೆಯ ಯೋಧರಿಗೆ ಮತ್ತು ಸಾಮಾನ್ಯ ಜನತೆಗೆ ಕೂಡ ಸಿಗಲಿದೆ. ದೇಶದ ಭದ್ರತೆಗಿಂತ ಮುಖ್ಯವಾದ ವಿಷಯ ಬೇರೊಂದಿಲ್ಲ. ಆದರೆ ಒಂದು ಸಮಯದಲ್ಲಿ ನಮ್ಮ ದೇಶದ ಭದ್ರತೆ ಹಿತಾಸಕ್ತಿ ವಿಷಯದಲ್ಲಿ ರಾಜಿ ಮಾಡಿಕೊಂಡದ್ದನ್ನು ನಾವು ನೋಡಿದ್ದೇವೆ ಎಂದರು.

ಹಲವು ಪ್ರಮುಖ ಇತರ ಯೋಜನೆಗಳನ್ನು ಸಹ ಅಟಲ್ ಸುರಂಗದಂತೆಯೇ ಪರಿಗಣಿಸಲಾಗಿದೆ. ಕಾರ್ಯಾತ್ಮಕವಾಗಿ ಲಡಾಕ್ ನ ದೌಲತ್ ಬೇಗ್ ಒಲ್ದಿ ಏರ್ ಸ್ಟ್ರಿಪ್ 40-45 ವರ್ಷಗಳಿಂದ ಮುಚ್ಚಲಾಗಿತ್ತು. ಇದನ್ನು ಮುಚ್ಚುವುದರ ಹಿಂದಿನ ಅಸಹಾಯಕತೆ ಏನಿತ್ತು, ಒತ್ತಡ ಏನಿದ್ದವು ಎಂದು ವಿವರವಾಗಿ ಹೇಳಲು ನಾನು ಹೋಗುವುದಿಲ್ಲ ಎಂದರು.

No Comments

Leave A Comment