Log In
BREAKING NEWS >
ನವೆ೦ಬರ್ 30ಕ್ಕೆ ಮು೦ದಿನ ಶ್ರೀಕೃಷ್ಣಾಪುರ ಮಠದ ಪರ್ಯಾಯಕ್ಕೆ ಬಾಳೆಮುಹೂರ್ತ.....ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಕೌಟುಂಬಿಕ ಕಲಹ : ವ್ಯಕ್ತಿಯಿಂದ ಇಬ್ಬರು ಮಹಿಳೆಯರ ಮೇಲೆ ಆಸಿಡ್ ದಾಳಿ..!

ನೆಲ್ಯಾಡಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಸೆ.24ರಂದು ಮುಂಜಾನೆ ನಡೆದಿದೆ.

ನೆಲ್ಯಾಡಿ ನಿವಾಸಿ ಬಿಜು(೩೮ವ.)ಎಂಬಾತ ತನ್ನ ಪತ್ನಿ ಶೈನಿ(೩೩ವ.)ಹಾಗೂ ಪತ್ನಿಯ ಚಿಕ್ಕಮ್ಮ ಝಾನ್ಸಿ(೩೬ವ.)ಎಂಬವರ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಆಸಿಡ್ ದಾಳಿಯಿಂದಾಗಿ ಇಬ್ಬರ ಮುಖ, ಕಣ್ಣಿನ ಭಾಗ ಸುಟ್ಟುಹೋಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ವಿವರ : ಬಿಜು ಹಾಗೂ ಆತನ ಪತ್ನಿ ಶೈನಿ ನಡುವೆ ಕಲಹ ಏರ್ಪಟಿದ್ದು ಈ ಹಿನ್ನೆಲೆಯಲ್ಲಿ ಶೈನಿ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿರುವ ತನ್ನ ತಂದೆಯ ತಮ್ಮನ ಮನೆಯಲ್ಲಿ ಮಗಳ ಜೊತೆಗೆ ವಾಸವಾಗಿದ್ದರು. ಅಲ್ಲಿಂದ ಶೈನಿಯವರು ತನ್ನ ಚಿಕ್ಕಮ್ಮ ಝಾನ್ಸಿಯವರ ಜೊತೆಗೆ ನೆಲ್ಯಾಡಿಯ ಆಶ್ರಮವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ಸೆ.೨೪ರಂದು ಬೆಳಿಗ್ಗೆ ೬ ಗಂಟೆಯ ವೇಳೆಗೆ ಶೈನಿ ಹಾಗೂ ಝಾನ್ಸಿಯವರು ಮನೆಯಿಂದ ಕೆಲಸಕ್ಕೆ ಹೋಗಲೆಂದು ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಕಾದು ಕುಳಿತಿದ್ದ ಆರೋಪಿ ಬಿಜು ಇಬ್ಬರ ಮೇಲೂ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಸುದ್ದಿ ತಿಳಿಯುತ್ತಲೇ ಶೈನಿಯವರ ಚಿಕ್ಕಪ್ಪ ಏಲಿಯಸ್‌ರವರು ಸ್ಥಳಕ್ಕೆ ಆಗಮಿಸಿದ್ದು ಇಬ್ಬರನ್ನೂ ರಿಕ್ಷಾದಲ್ಲಿ ನೆಲ್ಯಾಡಿಯ ಆಸ್ಪತ್ರೆಯೊಂದಕ್ಕೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಆಸಿಡ್ ದಾಳಿಯಿಂದಾಗಿ ಇಬ್ಬರ ಮುಖ ಹಾಗೂ ದೇಹದಲ್ಲಿ ತೀವ್ರ ಸ್ವರೂಪದ ಸುಟ್ಟ ಗಾಯವಾಗಿದೆ ಎಂದು ವರದಿಯಾಗಿದೆ.

ಪೊಲೀಸರು ಘಟನೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

No Comments

Leave A Comment