Log In
BREAKING NEWS >
ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ಯುವಕನ ಕೊಚ್ಚಿಕೊಲೆ....ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ; ಬೆಳ್ಳಂಬೆಳಗ್ಗೆ ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ....

ಗಲ್ಲುಶಿಕ್ಷೆ ಪ್ರಶ್ನಿಸಲು ಕುಲಭೂಷಣ್ ಜಾಧವ್ ಗೆ ಮತ್ತೆ 4 ತಿಂಗಳ ಕಾಲಾವಕಾಶ; ಸುಗ್ರೀವಾಜ್ಞೆಗೆ ಪಾಕ್ ಸಂಸತ್ತು ಅನುಮೋದನೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಧಿಕಾರಿ ಕುಲಭೂಷಣ್ ಜಾಧವ್ ತಮ್ಮ ವಿರುದ್ಧದ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಮತ್ತೆ ನಾಲ್ಕು ತಿಂಗಳ ಕಾಲಾವಕಾಶ ನೀಡುವ ಸುಗ್ರೀವಾಜ್ಞೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ.

ಈ ಹಿಂದೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗಕ್ಕೀಡಾಗಿದ್ದ ಪಾಕಿಸ್ತಾನ ಕುಲಭೂಷಣ್ ಜಾಧವ್ ಗೆ ರಾಯಭಾರ ಕಚೇರಿಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಮತ್ತು ತಮಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಬೇಕು ಎಂದು ಆದೇಶ ನೀಡಿತ್ತು. ಈ ಆದೇಶದ  ಅನ್ವಯ ಪಾಕಿಸ್ತಾನ ಸಂಸತ್ ಇದೀಗ ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆ ಪ್ರಶ್ನಿಸುವ ಅರ್ಜಿ ಸಲ್ಲಿಕೆ ಮಾಡಲು 4 ತಿಂಗಳ ಕಾಲವಕಾಶ ನೀಡಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

ಈ ಹಿಂದೆ ಮೇ ತಿಂಗಳಲ್ಲಿ ಪ್ರಕಟವಾದ ಅಂತಾರಾಷ್ಟ್ರೀಯ ನ್ಯಾಯಾಲಯ (ವಿಮರ್ಶೆ ಮತ್ತು ಮರುಪರಿಶೀಲನೆ) ಸುಗ್ರೀವಾಜ್ಞೆಯ ಅವಧಿ ಇದೇ ಸೆಪ್ಟೆಂಬರ್ 17 ರಂದು ಮುಕ್ತಾಯಗೊಳ್ಳಲಿದೆ. ಆದರೆ ಪಾಕಿಸ್ತಾನದ ಸಂಸತ್ ಧ್ವನಿ ಮತದ ಮೂಲಕ ಈ ಸುಗ್ರೀವಾಜ್ಞೆಯನ್ನು ನಾಲ್ಕು ತಿಂಗಳ ಅವಧಿಗೆ ವಿಸ್ತರಿಸಿದೆ.

ಈ ಹಿಂದೆ ಕುಲಭೂಷಣ್‌ ಜಾಧವ್‌ ಪರ ವಾದ ಮಂಡಿಸುವುದಕ್ಕಾಗಿ ವಕೀಲರನ್ನು ನೇಮಕ ಮಾಡಿಕೊಳ್ಳಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಮಾಡುವ ಕುರಿತು  ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪಾಕಿಸ್ತಾನ ಹೇಳಿತ್ತು. ರಾಜತಾಂತ್ರಿಕ ಮಾರ್ಗದ ಮೂಲಕ ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಮಾಡುವಂತೆ ಭಾರತಕ್ಕೆ ಸಂದೇಶ ರವಾನಿಸಲಾಗಿತ್ತು. ಆದರೆ, ಈ ವರೆಗೂ ಭಾರತದಿಂದ ಯಾವುದೇ ಪ್ರತಿಕ್ರಿಯೆಗಳೂ ಬಂದಿಲ್ಲ ಎಂದು ಪಾಕಿಸ್ತಾನ  ವಿದೇಶಾಂಗ ಕಚೇರಿಯ ವಕ್ತಾರ ಜಾಹಿದ್ ಹಫೀಜ್ ಚೌಧರಿ ಹೇಳಿದ್ದರು.

ಪಾಕಿಸ್ತಾನದಲ್ಲಿ ಗೂಢಚಾರಿಕೆ ಮತ್ತು ಭಯೋತ್ಪಾದನೆ ನಡೆಸಿದ ಆರೋಪದ ಮೇರೆಗೆ 2017ರಲ್ಲಿ ಪಾಕ್ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್ ನ ಮೊರೆ ಹೋಗಿತ್ತು.

No Comments

Leave A Comment