ಭಾವಿ ಪತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಹೋಗಿ ಜಲಪಾತದಲ್ಲಿ ಬಿದ್ದು ಯುವತಿ ಸಾವು ಹೈದರಾಬಾದ್: ಭಾವಿ ಪತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಹೋಗಿ ಆಂಧ್ರ ಪ್ರದೇಶ ಮೂಲದ ಯುವತಿ ಜಲಪಾತದಲ್ಲಿ ಬಿದ್ದು ಪ್ರಾಣ ಬಿಟ್ಟಿರುವ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ. ಅಟ್ಲಾಂಟಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಪೊಲವರಪು ಕಮಲ ಎಂಬ ಯುವತಿ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಬಾಲ್ದ್ ರಿವರ್ ಫಾಲ್ ಗೆ ತೆರಳಿದ್ದಾರೆ. ಈ ವೇಳೆ ವಾಟರ್ ಫಾಲ್ ಬಳಿ ಸೆಲ್ಫಿ ಕ್ಲಿಕಿಸಿಕೊಳ್ಳಲು ತೆರಳಿದ ಜೋಡಿ ಕಾಲುಜಾರಿ ಬಿದ್ದಿದ್ದಾರೆ. ಇನ್ನು, ರಕ್ಷಣಾ ಕಾರ್ಯಾಚರಣೆ ನಡೆಸಿ ಪತಿಯನ್ನು ಸುರಕ್ಷಿತವಾಗಿ ಮೇಲೆ ಕರೆದುಕೊಂಡು ಬರಲಾಗಿದೆ. ಆದರೆ ಪೊಲವರಪು ಕಮಲ ಅವರ ಪ್ರಾಣ ಉಳಿಸುವುದಕ್ಕೆ ಸಾಧ್ಯವಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕಮಲ ಅವರು ತಮ್ಮ ಪದವಿ ವಿದ್ಯಾಭ್ಯಾಸವನ್ನು ಮುಗಿಸಿ ಅಮೆರಿಕಾಗೆ ತೆರಳಿದ್ದರು. ಅಮೆರಿಕಾದ ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. “ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದುಕೊಂಡಿದ್ದ ಮಗಳು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ತೆರಳಿದ್ದರು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಮಗಳಿಗೆ ಇತ್ತೀಚಿಗೆ ಉದ್ಯೋಗವೂ ಸಿಕ್ಕಿತ್ತು” ಎಂದು ಪೊಲವರಪು ಕಮಲ ಅವರ ತಾಯಿ ಹೇಳಿದ್ದಾರೆ. Share this:TweetWhatsAppEmailPrintTelegram