Log In
BREAKING NEWS >
ಉಡುಪಿ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ಗ್ರಾಮೀಣ ಉತ್ಪನ್ನಗಳ ಮೇಳಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ....ಪರ್ಯಾಯ ಪ೦ಚಶತಮಾನೋತ್ಸವಕ್ಕೆ ಅದ್ದೂರಿಯ ಚಾಲನೆ-ಗಣ್ಯರಿಗೆ ಸನ್ಮಾನ..ದಿನಕ್ಕೊ೦ದು ಭಾಗವತಾಮೃತ ಬಿ೦ದುಗಳು-ರಾಮಸ೦ದೇಶ ಪ್ರಸ್ತಕ ಅನಾವರಣ... ಜ 18ಕ್ಕೆ ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ

ಮಳೆರಾಯನ ಕಿರಿಕಿರಿಯೊ೦ದಿಗೆ ಸ೦ಪನ್ನಗೊ೦ಡ ವಿಟ್ಲಪಿ೦ಡಿ(ಲೀಲೋತ್ಸವ) ಉತ್ಸವ….

ಉಡುಪಿ: ಶ್ರೀಕೃಷ್ಣನ ಜನನ ಸಂಭ್ರಮವನ್ನು ಆಚರಿಸುವ ವಿಟ್ಲಪಿಂಡಿ ಎಂದು ಕರೆಯುವ ಶ್ರೀಕೃಷ್ಣಲೀಲೋತ್ಸವ ಜನಸಂದಣಿ ಇಲ್ಲದೆ ಶುಕ್ರವಾರ ಶ್ರೀಕೃಷ್ಣಮಠದಲ್ಲಿ ಸರಳವಾಗಿ ನೆರವೇರಿತು.

ಅಷ್ಟಮಿ ದಿನ ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶುಕ್ರವಾರ ಮುಂಜಾವ ಮಹಾಪೂಜೆಯನ್ನು ನೆರವೇರಿಸಿದರು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಯಶೋದಾ ಕೃಷ್ಣ ಅಲಂಕಾರವನ್ನು ನಡೆಸಿದರು. ಕೊರೊನಾ ಕಾರಣದಿಂದ ಉತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳದಿರುವುದು ಮಾತ್ರವಲ್ಲದೆ ಭೋಜನ ಪ್ರಸಾದವೂ ಇರಲಿಲ್ಲ. ಅಪರಾಹ್ನ ರಥಬೀದಿಯಲ್ಲಿ ಸ್ವಾಮೀಜಿಯವರು, ಮಠದ ಸಿಬಂದಿ ಉತ್ಸವದ ಮೆರವಣಿಗೆ ನಡೆಸಿದರು. ಒಂದು ಕಂಸನ ವೇಷ, ಪುರಂದರ ದಾಸರ ವೇಷಗಳು ಮಾತ್ರ ಇದ್ದವು.

ಚಿನ್ನದ ರಥದಲ್ಲಿ ಮಣ್ಣಿನಿಂದ ಮಾಡಿದ ಕೃಷ್ಣನ ವಿಗ್ರಹವನ್ನು ಮತ್ತು ಇನ್ನೊಂದು ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಯನ್ನು ಇರಿಸಿ ಉತ್ಸವ ನಡೆಯಿತು. ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. ಒಟ್ಟು 12 ಗುರ್ಜಿಗಳು ಮತ್ತು ಎರಡು ಮಂಟಪಗಳಲ್ಲಿ ತೂಗು ಹಾಕಿದ ಮಡಕೆಗಳನ್ನು ಸಾಂಪ್ರದಾಯಿಕ ಗೋವಳರ ವೇಷ ಹಾಕಿದ ಗೋಶಾಲೆಯ ಸಿಬಂದಿ ಒಡೆಯುತ್ತ ಮುಂದೆ ಸಾಗಿದರು. ಕೊನೆಯಲ್ಲಿ ಕೃಷ್ಣನ ಮಣ್ಣಿನ ವಿಗ್ರಹವನ್ನು ಮಧ್ವಸರೋವರದಲ್ಲಿ ವಿಸರ್ಜಿಸಲಾಯಿತು.

ಪ್ರಸಾದ ವಿತರಣೆ
ಶುಕ್ರವಾರ ಬೆಳಗ್ಗೆ ಉಡುಪಿ ನಗರದ ವಿವಿಧೆಡೆ ಕಾರ್ಯಕರ್ತರು ಕೃಷ್ಣಾಷ್ಟಮಿಯ ಪ್ರಸಾದಗಳನ್ನು ವಿತರಿಸಿದರು. ರಥಬೀದಿಯಲ್ಲಿ ಹಾಕಿದ ಕೌಂಟರ್‌ನಲ್ಲಿ ಪ್ರಸಾದಗಳನ್ನು ವಿತರಿಸಲಾಯಿತು.

ನಿರಂತರ ಮಳೆ
ಶ್ರೀಮದ್ಭಾಗವತ ಪುರಾಣದಲ್ಲಿ ವರ್ಣನೆ ಇರುವಂತೆ ಕೃಷ್ಣನ ಜನನ ವೇಳೆ ಮಾತ್ರವಲ್ಲದೆ ಗುರುವಾರ ಮತ್ತು ಶುಕ್ರವಾರ ನಿರಂತರ ಸಾಮಾನ್ಯ ಮಳೆ ಸುರಿದಿದೆ. ಶುಕ್ರವಾರ ವಿಟ್ಲಪಿಂಡಿ ಉತ್ಸವದ ವೇಳೆಯೂ ನಿರಂತರ ಮಳೆ ಸುರಿಯುತ್ತಿತ್ತು.

ಕೃಷ್ಣಾರ್ಘ್ಯ ಪ್ರದಾನ
ಗುರುವಾರ ಮಧ್ಯರಾತ್ರಿ ಮಹಾಪೂಜೆ ಬಳಿಕ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ, ಅದಮಾರು ಹಿರಿಯ, ಕಾಣಿಯೂರು ಶ್ರೀಗಳು ಕೃಷ್ಣಾರ್ಘ್ಯ ಪ್ರದಾನ ಮಾಡಿದರು.

ಬಾಲಕೃಷ್ಣನ ಉತ್ಸವಕ್ಕೆ ಗೋವುಗಳು
ಶ್ರೀಕೃಷ್ಣನಿಗೆ ಪ್ರಿಯವಾದ ದೇಸೀ ಗೋವುಗಳು ವಿಟ್ಲಪಿಂಡಿ ಉತ್ಸವದ ವೇಳೆ ರಥಬೀದಿಯ ಸುತ್ತಲೂ ಕಂಡುಬಂದವು. “ಗೋಪಾಲಕೃಷ್ಣನ ಉತ್ಸವದಲ್ಲಿ ಗೋವುಗಳು’ ಪರಿಕಲ್ಪನೆಯಲ್ಲಿ ಶ್ರೀಕೃಷ್ಣಮಠ ಮತ್ತು ಅದಮಾರು ಮಠದ ಗೋವುಗಳನ್ನು ರಥಬೀದಿಯ ಸುತ್ತಲೂ ಕಟ್ಟಿ ಹಾಕಲಾಗಿತ್ತು. ಗೋವುಗಳ ಸಾಲುಗಳ ನಡುವೆ ಉತ್ಸವದ ಮೆರವಣಿಗೆ ಸಾಗಿತು. ಇಷ್ಟು ವರ್ಷಗಳಂತೆ ಜನ ಜಂಗುಳಿ, ವೇಷಗಳ ಭರಾಟೆ, ತಾಸೆ ವಾದ್ಯಗಳ ಸದ್ದು ಯಾವುದೂ ಇರಲಿಲ್ಲ. ನಾಲ್ಕೂ ಬೀದಿಗಳಲ್ಲಿ ಪೊಲೀಸರು ನಿಯೋಜನೆಗೊಂಡು ಸಾರ್ವಜನಿಕರನ್ನು ಒಳಗೆ ಬಿಡಲಿಲ್ಲ.

No Comments

Leave A Comment