Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ರಾಜ್ಯದ ಹಲವೆಡೆ ಮುಂದುವರೆದ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ಥ

ಬೆಂಗಳೂರು: ಕೊಡಗು, ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ರಾಜ್ಯದ ಹಲವೆಡೆ  ಧಾರಾಕಾರ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಕರುನಾಡ ಕಾಶ್ಮೀರ ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೀಕರ ಜಲಪ್ರಳಯದ ನೆನಪು ಮತ್ತೆ ಮರುಕಳಿಸಿದ್ದು, ಭಾರೀ ಮಳೆಯಿಂದ ರಾಜ್ಯದ ಹಲವೆಡೆ ಪ್ರವಾಹ, ಭೂಕುಸಿತವಾಗುತ್ತಿದ್ದು, ಜನಜೀವನ ಜರ್ಜರಿತವಾಗಿದೆ.

ಈ ಭಾರಿಯೂ ಕೊಡಗಿನಲ್ಲಿ ಪರಿಸ್ಥಿತಿ ದುಸ್ಥರವಾಗಿದ್ದು, ಭೂಕುಸಿತದ ನಂತರ ದೇವಾಲಯದ ಆರ್ಚಕರು, ಅವರ ಕುಟುಂಬ
ಸದಸ್ಯರು ಸೇರಿದಂತೆ ಐದು ಮಂದಿ ಕಾಣೆಯಾಗಿದ್ದಾರೆ. ಈ ಮಧ್ಯೆ ಹಾಸನದಲ್ಲಿ ನದಿ ದಾಟುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಕಲೇಶಪುರ ಬಳಿ ಎತ್ತಿನಹೊಳೆ ನದಿ ದಾಟುತ್ತಿದ್ದ ಸಿದ್ದಯ್ಯ (65) ಮೃತಪಟ್ಟ ವ್ಯಕ್ತಿ. ಅವರ ಮೃತದೇಹ ಗುರುವಾರ ಪತ್ತೆಯಾಗಿದೆ. ತುಮಕೂರು ಹಾಗೂ ಹಾಸನ ಜಿಲ್ಲೆಗಳ ಜೀವನದಿಯಾಗಿರುವ ಹೇಮಾವತಿ ನದಿ ಸಕಲಕೇಶಪುರ ಮತ್ತು ಅರಕಲಗೂಡು ಭಾಗದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕಳೆದ ಕೆಲ ದಿನಗಳಿಂದ ಮಳೆ ಮುಂದುವರೆದಿದ್ದು,ಅನೇಕ ನದಿಗಳು  ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸುರಕ್ಷಿತ ಪ್ರದೇಶಗಳಿಗೆ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಪ್ರತಿಕೂಲ ಹವಾಮಾನದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಇಂದಿನ ಪರಿಸ್ಥಿತಿ ಆಧಾರಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಸಿ ಅನ್ನಿಸ್ ಕೆ ಜಾಯ್ ತಿಳಿಸಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನ ಕೆಲ ಕಡೆಗಳಲ್ಲಿ ನದಿಯ ನೀರಿನ ಮಟ್ಟ ಹೆಚ್ಚಾಗಿ, ಸಂಪರ್ಕ ಕಡಿತಗೊಂಡಿದೆ.ಚಾರ್ಮಡಿ ಘಾಟ್ ನಲ್ಲಿ ಸಣ್ಣ ಮಟ್ಟದ ಭೂಕುಸಿತವಾಗಿದೆ. ಕಾರವಾರ ವಲಯದ ಕೊಂಕಣ್ಣ ರೈಲ್ವೆಯ ಪೆರ್ನೆಮ್ ಸುರಂಗದ ಒಳಗಡೆ ಗೋಡೆ ಕುಸಿತವಾಗಿರುವ ಬಗ್ಗೆ ವರದಿಯಾಗಿದೆ.

ಪ್ರಸಿದ್ಧ ಧಾರ್ಮಿಕ ಸ್ಥಳ ಧರ್ಮಸ್ಥಳ ಮಂಜುನಾಥ ದೇವಾಲಯದ ಸ್ನಾನಘಟ್ಟ ಕೂಡಾ ಜಲವೃತವಾಗಿದ್ದು, ಭಕ್ತರು ಸ್ನಾನ ಮಾಡಲು ನದಿಗೆ ಇಳಿಯಲು ಅವಕಾಶ ನೀಡುತ್ತಿಲ್ಲ.ಚಾರ್ಮಡಿ ಘಾಟ್ ರಸ್ತೆಯಲ್ಲಿ ಭೂ ಕುಸಿತವಾಗಿದ್ದು, ಇಂತಹ ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವ ಜನರನ್ನು ಮಿಟ್ಟಬಾಗಿಲು ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ತಿಳಿಸಿದ್ದಾರೆ.

ಸಮುದ್ರದಲ್ಲಿನ ಗಂಟೆಗೆ 50ರಿಂದ 60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.  ಚಿಕ್ಕಮಗಳೂರು ಜಿಲ್ಲೆ ಕಸಬಾ ಹೋಬಳಿಯಲ್ಲಿ ಭಾಗಶ: ಅಥವಾ ಪೂರ್ಣ ಹಾನಿಯಾಗಿದೆ. ಮೂಡಿಗೆರೆ ತಾಲೂಕಿನ ಮನೆಗಳು ಹಾನಿಗೊಂಡಿವೆ.ಹೇಮಾವತಿ ನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಕುದುರೆಮುಖ, ಹಿರೆಬೈಲ್,  ಉಗ್ಗೆಹಳ್ಳಿಯಲ್ಲಿನ ರಸ್ತೆಯಲ್ಲಿ ಸಂಚರಿಸುವವರು ಭೀತಿಗೊಳಗಾಗುವಂತಾಗಿದೆ.

ಮೈಸೂರು ಭಾಗದ ಕಪಿಲಾ, ಲಕ್ಷ್ಮಣ ತೀರ್ಥ, ಕಾವೇರಿ ನದಿ ನೀರಿನ ಹರಿವಿನ  ಮಟ್ಟದಲ್ಲೂ ಹೆಚ್ಚಾಗಿದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳು ಸೂಚನೆ ನೀಡಲಾಗಿದೆ.ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.ಇದರಿಂದಾಗಿ ಬೆಳಗಾವಿ ಹೊರವಲಯ ಹಾಗೂ ನಿಪ್ಪಾಣಿ ವಲಯದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ.

No Comments

Leave A Comment