Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ದುಬೆಗಿತ್ತು ಮಾಸಿಕ ಕೋಟಿ ರೂ. ಆದಾಯ ; ಖರ್ಚು ಮಾಡಿದ್ದರ ಬಗ್ಗೆ ತನಿಖೆ

ಕಾನ್ಪುರ: ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ಪಾತಕಿ ವಿಕಾಸ್‌ ದುಬೆ ಅಕ್ರಮ ಆಸ್ತಿ ಹಾಗೂ ಅವ್ಯವಹಾರ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿದ್ದು, ಈತನ ಅಸ್ತಿಯನ್ನು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ.

ದುಬೆ ತಿಂಗಳಿಗೆ ಕೋಟಿ ರೂ.ಆದಾಯ ಗಳಿಸುತ್ತಿದ್ದನು ಎಂದು ತಿಳಿದು ಬಂದಿದ್ದು, ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದಾನೆ, ಹೇಗೆ ವ್ಯಯಿಸಿದ್ದಾನೆ ಎಂಬುದನ್ನು ಇ.ಡಿ. ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.

60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಕುಖ್ಯಾತ ರೌಡಿ ತಿಂಗಳಿಗೆ 90 ಲಕ್ಷ ರೂ.ನಿಂದ 1.2 ಕೋಟಿ ರೂ.ವರೆಗೆ ಆದಾಯ ಗಳಿಸುತ್ತಿದ್ದನು.

ಈತ ಮದ್ಯ ವ್ಯಸನಿಯಾಗಿರಲಿಲ್ಲ. ಆಡಂಬರದ ಬದುಕು ನಡೆಸುತ್ತಿರಲಿಲ್ಲ. ಸರಳವಾದ ಬಟ್ಟೆ ಧರಿಸುತ್ತಿದ್ದ. ಸಾಮಾನ್ಯನಂತೆ ಜೀವನ ನಡೆಸುತ್ತಿದ್ದ. ಬ್ಯಾಂಕ್‌ಗಳಲ್ಲೂ ಕೂಡ ದೊಡ್ಡ ಮಟ್ಟದ ವಹಿವಾಟು ನಡೆಸಿರುವುದು ಕಂಡು ಬಂದಿಲ್ಲ. ಹೀಗಾಗಿ ಅತ ಹಣವನ್ನು ಎಲ್ಲಿ, ಹೇಗೆ ಹೂಡಿಕೆ ಮಾಡಿದ್ದನ್ನು ಎಂಬುದನ್ನು ಪತ್ತೆಹಚ್ಚುವುದು ಸವಾಲಾಗಿದೆ. ದುಬೆ ಆಪ್ತರು, ಸಹಚರರು ಹಾಗೂ ಈತ ಸಂಪರ್ಕ ಹೊಂದಿದ್ದ ಉದ್ಯಮಿಗಳ ಬಗ್ಗೆ ಇ.ಡಿ. ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿದು ಬಂದಿದೆ.

ಲಕ್ನೋದಲ್ಲಿ 22 ಕೋಟಿ ರೂ. ಮೌಲ್ಯದ ಬಂಗಲೆ ಸೇರಿದಂತೆ ವಿವಿಧೆಡೆ 11 ಫ್ಲ್ಯಾಟ್‌, 15 ಮನೆಗಳನ್ನು ದುಬೆ ಹೊಂದಿದ್ದಾನೆ. ಈ ಪೈಕಿ ಬಹುತೇಕ ಆಸ್ತಿಗಳು ಬೇನಾಮಿಯಾಗಿವೆ. ಕಳೆದ 3 ವರ್ಷಗಳಲ್ಲಿ 14 ದೇಶಗಳನ್ನು ಸುತ್ತಿದ್ದನು ಎಂದು ತಿಳಿದು ಬಂದಿದೆ.

ಪೊಲೀಸರನ್ನು ಭೀಕರವಾಗಿ ಹತ್ಯೆಗೈದಿದ್ದ ದುಬೆ ಗ್ಯಾಂಗ್‌
ಡಿವೈಎಸ್ಪಿ ಸೇರಿದಂತೆ 8 ಪೊಲೀಸರನ್ನು ವಿಕಾಸ್‌ ದುಬೆ ಹಾಗೂ ಆತನ ಸಹಚರರು ಭೀಕರವಾಗಿ ಹತ್ಯೆಗೈದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.  ಕೊಲೆಗೈದ ಬಳಿಕ ಪೊಲೀಸರನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಪ್ರತಿಕಾರ ತೀರಿಸಿಕೊಂಡಿದ್ದಾರೆ. ಡಿವೈಎಸ್ಪಿ ದೇವೇಂದ್ರ ಮಿಶ್ರಾ ಮೇಲೆ 4 ಬಾರಿ ಗುಂಡು ಹಾರಿಸಲಾಗಿದೆ.

ಒಂದು ಗುಂಡು ತಲೆಗೆ, ಮತ್ತೊಂದು ಬುಲೆಟ್‌ ಎದೆಗೆ ಹಾಗೂ ಎರಡು ಗುಂಡುಗಳು ಹೊಟ್ಟೆಗೆ ಹಾರಿಸಲಾಗಿದೆ. ಬಳಿಕ ಅವರ ಕಾಲನ್ನು ಕಡಿದಿದ್ದಾರೆ. ಮೂವರು ಪೊಲೀಸರ ತಲೆ ಹಾಗೂ ಮುಖಕ್ಕೆ ತೀರ ಹತ್ತಿರದಿಂದ ಗುಂಡು ಹಾರಿಸಿ ರು ವುದು ತಿಳಿದು ಬಂದಿದೆ. ಜು.2ರಂದು ಕಾನ್ಪುರದ ಬಿಕ್ರು ಹಳ್ಳಿಯಲ್ಲಿ ಎಂಟು ಪೊಲೀಸರನ್ನು ದುಬೆ ಗ್ಯಾಂಗ್‌ ಹತ್ಯೆಗೈದಿತ್ತು.

ಮತ್ತೊಬ್ಬ ಸಹಚರ ಸೆರೆ, 2 ರೈಫ‌ಲ್‌ ವಶ
ಉತ್ತರ ಪ್ರದೇಶದಲ್ಲಿ ರೌಡಿ ವಿಕಾಸ್‌ ದುಬೆಯ ಮತ್ತೊಬ್ಬ ಸಹಚರ ಸೆರೆ ಸಿಕ್ಕಿದ್ದಾನೆ. ಚೌಬೆಪುರ ಬಳಿ ಸೋಮವಾರ ಮಧ್ಯ ರಾತ್ರಿ ರೌಡಿ ಶಶಿಕಾಂತ್‌ನನ್ನು ಪೊಲೀಸರು ಬಂಧಿಸಿದ್ದು, ಈತ ಲೂಟಿ ಮಾಡಿದ್ದ 2 ರೈಫ‌ಲ್‌ಗ‌ಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ 21 ಮಂದಿ ಆರೋಪಿಗಳಾಗಿದ್ದು, ಈ ಪೈಕಿ ನಾಲ್ವರನ್ನು ಬಂಧಿಸಲಾಗಿದೆ. 6 ಮಂದಿ ಎನ್ ‌ಕೌಂಟರ್‌ನಲ್ಲಿ ಹತರಾಗಿದ್ದಾರೆ. 11 ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment