Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಸಿಎಂ ಅಶೋಕ್ ಗೆಹ್ಲೊಟ್ ಗೆ 109 ಶಾಸಕರ ಬೆಂಬಲವಿದೆ: ರಾಜಸ್ತಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ

ಜೈಪುರ: ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಘೋಷಿಸಿದ ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕ ಅವಿನಾಶ್ ಪಾಂಡೆ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿಗಳಿಗೆ ಬೆಂಬಲ ನೀಡುವುದಾಗಿ 109 ಶಾಸಕರು ಸಹಿ ಹಾಕಿದ್ದಾರೆ ಎಂದು ಅವಿನಾಶ್ ಪಾಂಡೆ ತಿಳಿಸಿದ್ದಾರೆ. ರಾಜಸ್ತಾನದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿರುವ ಅವಿನಾಶ್ ಪಾಂಡೆ, ಇನ್ನೂ ಕೆಲವು ಶಾಸಕರು ಗೆಹ್ಲೊಟ್ ಜೊತೆ ಸಂಪರ್ಕದಲ್ಲಿದ್ದು ಅವರು ಕೂಡ ಪತ್ರಕ್ಕೆ ಸಹಿ ಹಾಕಲಿದ್ದಾರೆ ಎಂದರು.

ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದು ಇಂದು ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ವಿಪ್ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರದಲ್ಲಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವದಲ್ಲಿ ತಮಗೆ ಸಂಪೂರ್ಣ ವಿಶ್ವಾಸವಿದೆ, ನಮ್ಮ ಬೆಂಬಲ ಸರ್ಕಾರಕ್ಕಿದೆ ಎಂದು 109 ಕಾಂಗ್ರೆಸ್ ಶಾಸಕರು ಸಹಿ ಹಾಕಿದ್ದಾರೆ. ಇನ್ನು ಕೆಲವು ಶಾಸಕರು ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಇಂದು ಅವರು ಪತ್ರಕ್ಕೆ ಸಹಿ ಹಾಕಲಿದ್ದಾರೆ ಎಂದು ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಸಚಿನ್ ಪೈಲಟ್ ಅವರು ದೆಹಲಿಗೆ ಹೋಗಿದ್ದಾರೆ, ನೀವು ಭೇಟಿ ಮಾಡಿದ್ದೀರಾ ಎಂದು ಸುದ್ದಿಗಾರರು ಕೇಳಿದಾಗ, ಅವರು ದೆಹಲಿಯಲ್ಲಿದ್ದಾರೆಯೇ? ನನಗೆ ಗೊತ್ತಿರಲಿಲ್ಲ. ದೆಹಲಿಯಲ್ಲಿ ನಾನು ಅವರನ್ನು ಭೇಟಿ ಮಾಡಲಿಲ್ಲ ಎಂದು ನಿನ್ನೆ ಜೈಪುರಕ್ಕೆ ಬಂದಿಳಿದಿದ್ದ ಅವಿನಾಶ್ ಪಾಂಡೆ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದರು.

ಇಂದು ಬೆಳಗ್ಗೆ ಸಚಿನ್ ಪೈಲಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವಿನಾಶ್ ಪಾಂಡೆ, ನಾನು ಸಚಿನ್ ಪೈಲಟ್ ಅವರ ಬಳಿ ಮಾತನಾಡಲು ಪ್ರಯತ್ನಿಸಿದ್ದೇನೆ. ಅವರಿಗೆ ಸಂದೇಶ ಕೂಡ ಕಳುಹಿಸಿದ್ದೆ, ಆದರೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಪಕ್ಷಕ್ಕಿಂತ ಯಾರೂ ಮೇಲಲ್ಲ. ಪಕ್ಷ ಅವರ ಮಾತುಗಳನ್ನು ಕೇಳಲು ಸಿದ್ಧವಿದೆ, ಆದರೆ ಅಶಿಸ್ತನ್ನು ಸಹಿಸುವುದಿಲ್ಲ. ಅವರು ಇಂದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ, ಹಣದ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೊಟ್ ಆರೋಪಿಸಿದ್ದಾರೆ. ಇನ್ನೊಂದೆಡೆ ಸಚಿನ್ ಪೈಲಟ್ ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್ ನ್ನು ಭೇಟಿ ಮಾಡಿ ತಮಗಾದ ನೋವಿನ ಬಗ್ಗೆ ಹೇಳಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಸಚಿನ್ ಪೈಲಟ್ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಬಗ್ಗೆ ಕೂಡ ಮಾತುಕತೆಯಾಡುತ್ತಿದ್ದಾರೆ ಎಂದು ವರದಿಗಳು ಬರುತ್ತಿವೆ.

ವಿಶೇಷ ಕಾರ್ಯಪಡೆ(ಎಸ್ಒಜಿ) ಕಡೆಯಿಂದ ಸಮ್ಮನ್ಸ್ ಬಂದ ನಂತರ ಸಚಿನ್ ಪೈಲಟ್ ತೀವ್ರ ಅಸಮಾಧಾನಗೊಂಡು ಸಿಎಂ ಅಶೋಕ್ ಗೆಹ್ಲೊಟ್ ವಿರುದ್ಧ ಬಹಿರಂಗವಾಗಿ ಸಮರ ಸಾರಿದ್ದಾರೆ. ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಹೇಳಿಕೆ ನೀಡುವಂತೆ ಎಸ್ಒಜಿ ಸಚಿನ್ ಪೈಲಟ್ ಅವರಿಗೆ ಕಳೆದ ಶುಕ್ರವಾರ ಸಮ್ಮನ್ಸ್ ಜಾರಿ ಮಾಡಿದ್ದು ಇದಾದ ಬಳಿಕ ಉಭಯ ನಾಯಕರು ಬಹಿರಂಗವಾಗಿ ಕಚ್ಚಾಡಿಕೊಳ್ಳುತ್ತಿದ್ದಾರೆ.

ಗೆಹ್ಲೊಟ್ ಅವರ ಕಾರ್ಯವೈಖರಿ ಸರಿಯಾಗಿಲ್ಲ ಎಂದು ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್ ಬಳಿ ಹೇಳಿಕೊಳ್ಳಲು ಸಚಿನ್ ಪೈಲಟ್ ಹೋಗಿದ್ದು ಅವರು ಮಾತುಕತೆಗೆ ಸಿಗಲಿಲ್ಲ. ಬದಲಾಗಿ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಬಳಿ ಹೇಳಿಕೊಂಡಿದ್ದಾರೆ. ಆಗ ಅವರು ರಾಜಸ್ತಾನ ಸರ್ಕಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರಾಜಸ್ತಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ಈಗಾಗಲೇ ಸೋನಿಯಾ ಗಾಂಧಿಯವರಿಗೆ ವರದಿ ನೀಡಿದ್ದು ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲ ಎಂದು ಅದರಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ.

200 ಸದಸ್ಯ ಬಲದ ರಾಜಸ್ತಾನ ವಿಧಾನಸಭೆಯಲ್ಲಿ ಕಾಂಗ್ರೆಸ್ ನ 107 ಶಾಸಕರಿದ್ದು ಬಿಜೆಪಿಯ 72 ಶಾಸಕರಿದ್ದಾರೆ.

No Comments

Leave A Comment