Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಮಹಾರಾಷ್ಟ್ರಕ್ಕೆ ಬಂದಪ್ಪಳಿಸಿದ ನಿಸರ್ಗ ಚಂಡಮಾರುತ: 3 ಗಂಟೆಗಳ ಕಾಲ ಕರಾವಳಿ ತೀರ ಪ್ರದೇಶಗಳ ಮೇಲೆ ಗಂಭೀರ ಪ್ರಭಾವ

ಮುಂಬೈ: ಈಗಾಗಲೇ ಕೊರೋನಾ ವೈರಸ್ ನಿಂದ ನಲುಗಿ ಹೋಗಿರುವ ಮಹಾರಾಷ್ಟ್ರ ರಾಜ್ಯಕ್ಕೆ ನಿಸರ್ಗ ಚಂಡಮಾರುತ ಬಂದಪ್ಪಳಿಸಿದ್ದು, ಮುಂದಿನ ಮೂರು ಗಂಟೆಗಳ ಕಾಲ ಮಹಾರಾಷ್ಟ್ರದ ಕರಾವಳಿ ತೀರ ಪ್ರದೇಶಗಳ ಮೇಲೆ ಗಂಭೀರ ಪ್ರಭಾವ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಚಂಡಮಾರುತ ಪರಿಣಾಮ ಮಹಾರಾಷ್ಟ್ರದ ಹಲವೆಡೆ ಈಗಾಗಲೇ ಭಾರೀ ಮಳೆ ಹಾಗೂ ಗಾಳಿ ಬೀಸುತ್ತಿದ್ದು, ಗಾಳಿಯ ರಭಸಕ್ಕೆ ಹಲವು ಮನೆಗಳ ಮೇಲ್ಚಾವಣಿಗಳು ಹಾರಿ ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.

ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಚಂಡಮಾರುತದ ಹೊಡೆತಕ್ಕೆ ಗುಜರಾತ್ ರಾಜ್ಯ ಕೂಡ ಸಿಲುಕಲಿದ್ದು, ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಹಲವು ಜನರನ್ನು ಸ್ಥಳಾಂತರ ಮಾಡಲಾಗಿದೆ.

ನಿಸರ್ಗ ಚಂಡಮಾರುತ ಅಧಿಕೃವಾಗಿ ಮಹಾರಾಷ್ಟ್ರ ಕರಾವಳಿಗೆ ಬಂದಪ್ಪಳಿಸಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಮಹಾರಾಷ್ಟ್ರ ಕರಾವಳಿಯಾದ್ಯಂತ ತನ್ನ ಪ್ರಭಾವ ಬೀರಲಿದೆ. ಇದರಂತೆ ಭಾರೀ ಮಳೆ ಹಾಗೂ ಬಿರುಗಾಳಿ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಮುಂಬೈ ನಗರದಾದ್ಯಂತ ಅತ್ಯಂತ ಕಟ್ಟೆಚ್ಚರ ಘೋಷಿಸಲಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೆ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಜನ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರ, ಗುಜರಾತ್, ದಿಯು ಹಾಗೂ ದಮನ್, ದಾದ್ರಾ ಹಾಗೂ ನಗರ್ ಹವೇರಿ ಚಂಡಮಾರುತದ ಪ್ರಭಾವಕ್ಕೆ ಒಳಗಾಗಲಿದ್ದು, ಈಗಾಗಲೇ ರಕ್ಷಮಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ.

ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಪ್ರವೃತ್ತವಾಗಿದ್ದು, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ 40 ಎನ್’ಡಿಆರ್’ಎಫ್ ತಂಡಗಳು ನಿಯೋಜನೆಗೊಂಡಿವೆ. ಇನ್ನು ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

No Comments

Leave A Comment