ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮತ್ತು 4R ಗ್ರೂಪ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥರಾಗಿರುವ ಮುತ್ತಪ್ಪ ರೈ(68) ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.
ತಡರಾತ್ರಿ ಸುಮಾರು 2:30 ರ ಸುಮಾರಿಗೆ ಮುತ್ತಪ್ಪ ರೈ ವಿಧಿವಶರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ಎರಡು ವರ್ಷಗಳಿಂದ ಇವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಏಪ್ರಿಲ್ 30ರಂದು ಆರೋಗ್ಯ ಬಿಗಡಾಯಿಸಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
ಬಿಡದಿಯ ಸ್ವಗೃಹದಲ್ಲಿ ಶುಕ್ರವಾರ ಮಧ್ಯಾಹ್ನದ ನಂತರ ಕುಟುಂಬ ಸದಸ್ಯರಿಂದ ಮಾತ್ರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರು ಇಬ್ಬರು ಪುತ್ರರು, ಮೂವರು ತಮ್ಮಂದಿರು, ಒಬ್ಬ ತಂಗಿ, ಅಪಾರವಾದ ಅಭಿಮಾನಿಗಳನ್ನು ಮತ್ತು ಬಂಧುವರ್ಗವನ್ನು ಅಗಲಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರೈ, ತಮಗೆ ಕ್ಯಾನ್ಸರ್ ಇರುವುದು ಸತ್ಯ ಎಂಬುದಾಗಿ ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದರು. ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಮುತ್ತಪ್ಪ ರೈ ಅನಾರೋಗ್ಯದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು.