Log In
BREAKING NEWS >
ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಪ.ಬಂಗಾಳ: ಹಾಲು ತರಲು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿ ಪೊಲೀಸ್ ಲಾಠಿ ಏಟಿಗೆ ಬಲಿ

ಕೋಲ್ಕತಾ: ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಹಾಲು ಹಾಗೂ ಇತರೆ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲವರು ಅನಗತ್ಯವಾಗಿ ಹೊರಗೆ ಬರುತ್ತಿದ್ದಾರೆ ಎಂದು ಪೊಲೀಸರು ಸಿಕ್ಕಸಿಕ್ಕವರ ಮೇಲೆ ಲಾಠಿ ಬೀಸುತ್ತಿದ್ದು, ಇದರ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಓರ್ವ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಹೌರಾ ಜಿಲ್ಲೆಯಲ್ಲಿ ಹಾಲು ತರಲು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಲಾಠಿಯಿಂದ ಥಳಿಸಿದ ಪರಿಣಾಮ ಲಾಲ್ ಸ್ವಾಮಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಎಬಿಪಿ ಆನಂದ ವರದಿ ಮಾಡಿದೆ.

ನನ್ನ ಪತಿ ಹಾಲು ತರಲು ಹೋಗಿದ್ದಾಗ ಜನಸಂದಣಿ ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ನನ್ನ ಪತಿ ಮೃತಪಟ್ಟಿದ್ದಾರೆ ಎಂದು ಲಾಲ್ ಸ್ವಾಮಿ ಪತ್ನಿ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪೊಲೀಸರು, ಲಾಲ್ ಸ್ವಾಮಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ನಯಬಾದ್ ನಲ್ಲಿ ಇಂದು ಮತ್ತೊಂದು ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಜನ 21ದಿನ ಮನೆಯಲ್ಲಿಯೇ ಇರಬೇಕು. ಅಗತ್ಯ ವಸ್ತುಗಳಾದ, ಹಾಲು, ತರಕಾರಿ, ಔಷಧಿ, ಆಸ್ಪತ್ರೆ ಹಾಗೂ ದಿನಸಿ ಅಂಗಡಿಗಳು ಎಂದಿನಂತೆ ತೆರೆದಿರಲಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

No Comments

Leave A Comment