Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಕಾಬುಲ್ ಗುರುದ್ವಾರದ ಮೇಲೆ ದಾಳಿ ಪ್ರಕರಣ: ಸಾವಿನ ಸಂಖ್ಯೆ 27ಕ್ಕೇರಿಕೆ, ದಾಳಿಯ ಹೊಣೆ ಹೊತ್ತ ಇಸಿಸ್, ದಾಳಿಯಲ್ಲಿ ಓರ್ವ ಭಾರತೀಯ ಮೃತ

ಕಾಬುಲ್: ಇಡೀ ವಿಶ್ವವೇ ಕೊರೋನಾ ವೈರಸ್ ನಿಂದಾಗಿ ತತ್ತರಿಸಿಹೋಗುತ್ತಿರುವ ಸಮಯದಲ್ಲೇ ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿನ ಗುರುದ್ವಾರದ ಮೇಲೆ ನಡೆದಿದ್ದ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27ಕ್ಕೇರಿದ್ದು, ಕುಖ್ಯಾತ ಅಂತಾರಾಷ್ಟ್ರೀಯ ಉಗ್ರ ಸಂಘಟನೆ  ಇಸ್ಲಾಮಿಕ್ ಸ್ಟೇಟ್ ದಾಳಿ ಹೊಣೆ ಹೊತ್ತಿದೆ.

ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಸಿಖ್ಖರ ಪವಿತ್ರ ಸ್ಥಳ ಗುರುದ್ವಾರದಲ್ಲಿ ಆತ್ಮಹತ್ಯಾ ದಾಳಿ ನಡೆಸಿದ್ದರು, ಈ ವೇಳೆ ಸಾಮೂಹಿಕ ಪ್ರಾರ್ಥನೆಯಲ್ಲಿದ್ದ ಕನಿಷ್ಠ 25 ಮಂದಿ ಸಿಖ್ ಧರ್ಮೀಯರು ಸಾವನ್ನಪ್ಪಿದ್ದಾರೆ. ಕಾಬುಲ್ ನ ಶೋರ್ ಬಜಾರ್ ಪ್ರಾಂತ್ಯದಲ್ಲಿರುವ ಧರ್ಮಶಾಲಾ  ಗುರುದ್ವಾರದ ಮೇಲೆ ಶಸ್ತ್ರಸಜ್ಜಿತ ಉಗ್ರರು ನಿನ್ನೆ ಬೆಳಗ್ಗೆ 7.45ರಲ್ಲಿ ದಾಳಿ ಮಾಡಿದ್ದು, ಈ ವೇಳೆ ಓರ್ವ ಉಗ್ರ ತಾನು ಕಟ್ಟಿಕೊಂಡಿದ್ದ ಬಾಂಬ್ ಅನ್ನು ಸ್ಫೋಟಿಸಿಕೊಂಡಿದ್ದಾನೆ. ಈ ವೇಳೆ 27 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದಾಗ  ಗುರುದ್ವಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿಖ್ಖರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.

ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿರುವಂತೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಓರ್ವ ಭದ್ರತಾ ಸಿಬ್ಬಂದಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಉಗ್ರರ ಕೃತ್ಯವನ್ನು ಭಾರತ ಕಠಿಣವಾಗಿ ಖಂಡಿಸಿದ್ದು, ಈ ಕುರಿತಂತೆ  ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಆಫ್ಘನ್ ನಲ್ಲಿ ಸಿಖ್ಖರ ಮಾರಣಹೋಮ ಉಗ್ರರ ಹೇಡಿತನದ ಪ್ರತೀಕ. ಧರ್ಮಾಧಾರಿತ ಹಿಂಸೆಯನ್ನು ಭಾರತ ಎಂದೂ ಸಹಿಸುವುದಿಲ್ಲ.

ದಾಳಿಯಲ್ಲಿ ಓರ್ವ ಭಾರತೀಯ ಮೃತ
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸಿಖ್ ಧಾರ್ಮಿಕ ಸ್ಥಳದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ಭಾರತೀಯ ಸಾವನ್ನಪ್ಪಿದ್ದಾನೆ.

ದಾಳಿಯ ಹೊಣೆ ಹೊತ್ತ ಇಸಿಸ್
ಇನ್ನು ಈ ಭೀಕರ ದಾಳಿಯ ಹೊಣೆಯನ್ನು ವಿಶ್ವದ ಕುಖ್ಯಾತ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ದಾಳಿ ಹೊಣೆ ಹೊತ್ತಿದೆ. ಈ ಕುರಿತಂತೆ ಖಾಮಾ ಪ್ರೆಸ್ ನ್ಯೂಸ್ ವರದಿ ಮಾಡಿದ್ದು, ಇಸಿಸ್ ಉಗ್ರ ಸಂಘಟನೆಯ ಉಗ್ರನೇ ಈ ದಾಳಿ ನಡೆಸಿದ್ದ ಎಂದು ವರದಿ ಮಾಡಿದೆ.

No Comments

Leave A Comment