Log In
BREAKING NEWS >
ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಕೊರೋನಾ ವೈರಸ್ ಭೀತಿ: ಸೆನ್ಸೆಕ್ಸ್ 2,758.39 ಅಂಕ ಕುಸಿತ, ಹೂಡಿಕೆದಾರರಿಗೆ 6.25 ಲಕ್ಷ ಕೋಟಿ ರೂ ನಷ್ಟ!

ಮುಂಬೈ: ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸತತ 5ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಬಲಿಯಾಗಿದ್ದು, ಒಂದೇ ದಿನ ಹೂಡಿಕೆದಾರರಿಗೆ ಬರೊಬ್ಬರಿ 6.25 ಲಕ್ಷ ಕೋಟಿ ರೂ ನಷ್ಟವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇಂದು 2,758.39 ಅಂಶ ಇಳಿಕೆಯಾಗಿ 31,345.09 ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 622 ಅಂಶ ಕುಸಿದು 9,300 ಅಂಶಕ್ಕೆ ಕುಸಿಯಿತು. ಶುಕ್ರವಾರ 45 ನಿಮಿಷಗಳ ವಹಿವಾಟು ನಂತರದಲ್ಲಿ ಏರಿಕೆ ಕಂಡಿದ್ದ ಷೇರುಗಳು ಇಂದು ಮತ್ತೆ ಭಾರಿ ಕುಸಿತಕಂಡಿವೆ.

ಮುಂಬೈ ಷೇರುಪೇಟೆಯ ಬಹುತೇಕ ಎಲ್ಲ ಕಂಪನಿಗಳ ಷೇರುಗಳು ನಕಾರಾತ್ಮಕ ವಹಿವಾಟು ಕಂಡಿದ್ದು, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಮತ್ತು ಆಕ್ಸಿಸ್‌ ಬ್ಯಾಂಕ್ ಕಂಪನಿ ಷೇರುಗಳು ಶೇ 4ರಿಂದ ಶೇ 13ರಷ್ಟು ಕುಸಿದಿವೆ. ಬೆಳಿಗ್ಗೆ 11:30ಕ್ಕೆ ಸೆನ್ಸೆಕ್ಸ್‌ 32,465.13 ಅಂಶ ಹಾಗೂ ನಿಫ್ಟಿ 9,477.15 ಅಂಶ ದಾಖಲಾಗಿದೆ.  ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 6,027.58 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.  ಕೊರೋನಾಗೆ ಜಗತ್ತಿನಾದ್ಯಂತ 6,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಹಾಗೂ 1,62,000ಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌, ಟಿಸಿಎಸ್‌, ಇನ್ಫೊಸಿಸ್‌, ಎಸ್‌ಬಿಐ, ಟೈಟಾನ್‌ ಕಂಪನಿ ಷೇರುಗಳ ಸಹ ನಕಾರಾತ್ಮಕ ವಹಿವಾಟು ಕಂಡಿವೆ. ಇದರಿಂದಾಗಿ ಸೂಚ್ಯಂಕ ಇಳಿಮುಖವಾಗಿದೆ. ಆದರೆ, ಯೆಸ್‌ ಬ್ಯಾಂಕ್‌ ಷೇರು ಶೇ 49.12ರಷ್ಟು ಏರಿಕೆಯಾಗಿ ₹38.10 ತಲುಪಿದೆ. ಸರ್ಕಾರದ ಸೂಚನೆಗಳ ಪ್ರಕಾರ 100ಕ್ಕೂ ಹೆಚ್ಚು ಯೆಸ್‌ ಬ್ಯಾಂಕ್‌ ಷೇರುಗಳನ್ನು ಹೊಂದಿರುವವರಿಗೆ 3 ವರ್ಷಗಳ ವರೆಗೂ ಷೇರು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಆಟೋಮ್ಯಾಟಿಕ್‌ ಲಾಕ್‌–ಇನ್‌ ಆಗಿರುವುದರಿಂದ ಹೂಡಿಕೆದಾರರು ಯೆಸ್‌ ಬ್ಯಾಂಕ್ ಷೇರು ಖರೀದಿಗೆ ಉತ್ಸಾಹ ತೋರಿದ್ದಾರೆ.

ಹೀಗಾಗಿ ಇಂದಿನ ವಹಿವಾಟಿನಲ್ಲಿ ಯೆಸ್ ಬ್ಯಾಂಕ್ ಷೇರುಗಳ ಮೌಲ್ಯ ಏರಿಕೆ ಕಂಡಿದೆ.

No Comments

Leave A Comment