Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಕೊರಾನಾ ಭೀತಿ; ಮಧ್ಯಪ್ರದೇಶ ಕಲಾಪ ಮುಂದಕ್ಕೆ, ಕಮಲ್ ನಾಥ್ ಗೆ 10 ದಿನ ರಿಲೀಫ್!

ಭೋಪಾಲ್: 22 ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಕಮಲ್ ನಾಥ್ ಸೋಮವಾರ ಬಹುಮತ ಸಾಬೀತು ಅಗ್ನಿಪರೀಕ್ಷೆಯಿಂದ ಬಚಾವ್ ಆಗಿದ್ದು, ವಿಧಾನಸಭೆ ಕಲಾಪವನ್ನು ಸ್ಪೀಕರ್ ಮಾರ್ಚ್ 26ಕ್ಕೆ ಮುಂದೂಡಿದ್ದಾರೆ.

ಸೋಮವಾರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು, ಸದನಕ್ಕೆ ಗೌರವ ಕೊಡಿ ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಜಂಟಿ ಅಧಿವೇಶನದಲ್ಲಿ ಮಾತನಾಡಿದ ರಾಜ್ಯಪಾಲರು ಸಂವಿಧಾನದಂತೆ ನಡೆದುಕೊಳ್ಳಿ ಎಂದು ಹೇಳಿ ಹೊರನಡೆದಿದ್ದರು. ಬಳಿಕ ಸ್ಪೀಕರ್, ಕೊರೊನಾ ಸೋಂಕು ಭೀತಿಯ ಹಿನ್ನೆಲೆಯ ಕಾರಣ ನೀಡಿ ಕಲಾಪವನ್ನು ಮಾರ್ಚ್ 26ಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.

ಸ್ಪೀಕರ್ ಈ ನಿರ್ಧಾರದಿಂದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಗೆ ಇದೀಗ ಸರ್ಕಾರವನ್ನು ಉಳಿಸಿಕೊಳ್ಳಲು ಬರೋಬ್ಬರಿ ಹತ್ತು ದಿನಗಳ ಕಾಲಾವಕಾಶ ಸಿಕ್ಕಂತಾಗಿದೆ. ಇದರಿಂದ ಕಮಲ್ ನಾಥ್ ಸರ್ಕಾರ ತಾತ್ಕಾಲಿಕ ಅಗ್ನಿಪರೀಕ್ಷೆಯ ಪ್ರಕ್ರಿಯೆಯಿಂದ ನಿರಾಳತೆ ಕಂಡಂತಾಗಿದೆ.

230 ಸದಸ್ಯ ಬಲ ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ನಿಧನ ಹೊಂದಿರುವ ಕಾರಣ ಎರಡು ಸ್ಥಾನ ಖಾಲಿ ಇದೆ. 22 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು, ಇದರಲ್ಲಿ 6 ಶಾಸಕರ ರಾಜೀನಾಮೆ ಅಂಗೀಕಾರವಾಗಿದೆ. ಹೀಗಾಗಿ ಸದನದ ಬಲ 222. ಸರ್ಕಾರ ಬಹುಮತ ಸಾಬೀತುಪಡಿಸಲು ಬೇಕಾದ ಮ್ಯಾಜಿಕ್ ಸಂಖ್ಯೆ 112. ಅಲ್ಲದೇ ಕಾಂಗ್ರೆಸ್ ಪಕ್ಷದ ಇನ್ನುಳಿದ ಶಾಸಕರ ರಾಜೀನಾಮೆ ಅಂಗೀಕಾರ ಬಾಕಿ ಉಳಿದಿದೆ. ಒಂದು ವೇಳೆ ರಾಜೀನಾಮೆ ಅಂಗೀಕಾರವಾದರೆ ಅಥವಾ ಗೈರುಹಾಜರಾದರೆ ಸದನದ ಬಲ 206ಕ್ಕೆ ಇಳಿಯಲಿದೆ.

ಇದರಿಂದಾಗಿ ಬಹುಮತಕ್ಕೆ ಬೇಕಾಗುವ ಸಂಖ್ಯೆ 104. ಕಾಂಗ್ರೆಸ್ ಪಕ್ಷದ ಬಲ 92ಕ್ಕೆ ಇಳಿಕೆಯಾಗಲಿದ್ದು, ಬಿಜೆಪಿ 107 ಶಾಸಕರನ್ನು ಹೊಂದಿದೆ. ಪಕ್ಷೇತರರು, ಬಿಎಸ್ಪಿ, ಎಸ್ಪಿ ಶಾಸಕರು ಕಾಂಗ್ರೆಸ್ ಜತೆ ಕೈಜೋಡಿಸಿದರೂ ಕೂಡಾ 99ಕ್ಕೆ ಏರಲಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 26ರ ನಂತರ ಕಮಲ್ ನಾಥ್ ಸರ್ಕಾರ ಬಹುಮತ ಸಾಬೀತುಪಡಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

No Comments

Leave A Comment