Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕೊರೋನಾ ಗೆ ಭಾರತದಲ್ಲಿ ಮೊದಲ ಬಲಿ?: ಎರ್ನಾಕುಲಂ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತ ವ್ಯಕ್ತಿ ಸಾವು

ಕೊಚ್ಚಿ: ಶಂಕಿತ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂ ನಲ್ಲಿ ನಡೆದಿದೆ.

ಏರ್ನಾಕುಲಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶಂಕಿತ ಕೊರೋನಾ ವೈರಸ್ ಗೆ ತುತ್ತಾಗಿದ್ದ ವ್ಯಕ್ತಿ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾನೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಸಾವನ್ನಪ್ಪಿದ ವ್ಯಕ್ತಿಯಿಂದ ಪಡೆಯಲಾಗಿದ್ದ ರಕ್ತದ ಮಾದರಿಯಲ್ಲಿ ಕೊರೋನಾ ವೈರಸ್ ನೆಗೆಟಿವ್ ಎಂದು ವರದಿ ಬಂದಿತ್ತು. ಎರಡನೇ ರಕ್ತದ ಮಾದರಿಯ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಹೀಗಾಗಿ ಆತ ಕೊರೋನಾ ವೈರಸ್ ನಿಂದಲೇ ಸಾವನ್ನಪ್ಪಿದ್ದಾನೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಏರ್ನಾಕುಲಂನ ವೈದ್ಯಕೀಯ ಕಾಲೇಜು ಸೂಪರಿಂಟೆಂಡ್ ಪೀಟರ್ ವಿಜಯಿಲ್ ಹೇಳಿದ್ದಾರೆ.

‘ಕಣ್ಣೂರು ಜಿಲ್ಲೆಯ ಪಯ್ಯನ್ನೂರ್ ಮೂಲದ ವ್ಯಕ್ತಿ ಮಲೇಷ್ಯಾದಿಂದ ನೇಡುಮಾಬಸ್ಸೆರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಗುರುವಾರ ರಾತ್ರಿ ಜ್ವರ ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಅಳಪುಳದಲ್ಲಿರುವ ವಿರಾಲಜಿ ಲ್ಯಾಬ್ ಗೆ ಕಳುಹಿಸಲಾಗಿತ್ತು. ಮೊದಲ ಸ್ಯಾಂಪಲ್ ನ ವರದಿ ಬಂದಿದ್ದು, ಎರಡನೇ ಸ್ಯಾಂಪಲ್ ನ ವರದಿ ಇನ್ನು ಬಂದಿಲ್ಲ ಎಂದು  ಪೀಟರ್ ವಿಜಯಿಲ್ ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು, ರಕ್ತದ ಮಾದರಿ ವರದಿ ಬರುವವರೆಗೂ ಇದು ಕೊರೋನಾ ವೈರಸ್ ಸಾವು ಎಂದು ಹೇಳಲಾಗುವುದಿಲ್ಲ. ಪ್ರಸ್ತುತ ಕೊರೋನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡಲು ಕೈಗೊಳ್ಳ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

No Comments

Leave A Comment