Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಮಂಗಳೂರು: ಮಾಜಿ ಸಚಿವ, ಸರಳ ವ್ಯಕ್ತಿತ್ವದ ಅಮರನಾಥ ಶೆಟ್ಟಿ ವಿಧಿವಶ

ಮಂಗಳೂರು: ರಾಜ್ಯದ ಮಾಜಿ ಸಚಿವ, ಜಾತ್ಯತೀತ ಜನತಾ ದಳ ಮುಖಂಡ, ಹಿರಿಯ ರಾಜಕಾರಣಿ ಕೆ. ಅಮರನಾಥ ಶೆಟ್ಟಿ (80) ಸೋಮವಾರ ನಿಧನರಾಗಿದ್ದಾರೆ. ಮೂಡಬಿದರೆಯವರಾದ ಅಮರನಾಥ ಶೆಟ್ಟಿ, ಅನಾರೋಗ್ಯದಿಂದ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಬೆಳಗ್ಗೆ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
1965ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ಕಾರ್ಕಳ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಮುಂದೆ ಮೂಡಬಿದಿರೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರ್ಕಳ ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷ, ಸಹಕಾರಿ ಸೇವಾ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು .

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ 1983, 1987 ಮತ್ತು 1994 ಹೀಗೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಪ್ರವಾಸೋದ್ಯಮ ಮತ್ತು ಮುಜರಾಯಿ ಸಚಿವರಾಗಿದ್ದರು. ನಂತರ ಅಭಯಚಂದ್ರ ಅವರ ಎದುರು ನಿರಂತರ ಪರಾಭವಗೊಂಡು, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

ಕರಾವಳಿಯಲ್ಲಿ ಜಾಲ್ತಿಯಲ್ಲಿರುವ ಗುತ್ತಿನ ಮನೆಯವರಾಗಿದ್ದರೂ ಇವರು ಸರಳ ಜೀವಿಯಾಗಿದ್ದರು. 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗೆದ್ದಾಗ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರಕಾರದಲ್ಲಿ ಮುಜರಾಯಿ ಇಲಾಖೆಯ ಸಚಿವರಾಗಿದ್ದರು. ಎರಡನೇ ಬಾರಿಗೆ 1985ರಲ್ಲಿ ಗೆದ್ದಾಗ ಯುವಜನ ಸೇವೆ, ಕ್ರೀಡಾ ಖಾತೆ ನೊಡಿಕೊಳ್ಳುತ್ತಿದ್ದರು. 1989ರಲ್ಲಿ ಸೋಲು ಕಂಡರು. ಅದಾದ ನಂತರ ಮತ್ತೆ 1994ರಲ್ಲಿ ಜಯಗಳಿಸಿ ಜೆ.ಎಚ್ ಪಟೇಲ್ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದರು. ಈ ಮೂಲಕ ಕರಾವಳಿ ಭಾಗದಲ್ಲಿ ಜೆಡಿಎಸ್ ಗೆ ಭದ್ರ ಬುನಾದಿ ಹಾಕಿದ್ದರು. ಜೊತೆಗೆ ಪಕ್ಷ ನಿಷ್ಠರಾಗಿದ್ದ ಇವರು ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತರಾಗಿ ಉಳಿದುಕೊಂಡಿದ್ದರು. 1999ರ ಬಳಿಕ ನಾಲ್ಕು ಬಾರಿ ಸ್ಪರ್ಧಿಸಿದರೂ ಸೋಲು ಕಂಡರು.

No Comments

Leave A Comment