Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಸಾಗರಮಾಲಾಕ್ಕೆ ವಿರೋಧ; ‘ಕಡಲ ತೀರ ಉಳಿಸಿ’ ಎಂದು ಕಾರವಾರ ಬಂದ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರು 2ನೇ ಹಂತದ ವಿಸ್ತರಣೆ ವಿರೋಧಿಸಿ ಮೀನುಗಾರರು ಕರೆ ನೀಡಿದ್ದ ಕಾರವಾರ ಬಂದ್‌ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಸಾಗರಮಾಲಾ ಯೋಜನೆಯಡಿಯಲ್ಲಿ ಕಾರವಾರ ಬಂದರಿನ ವಿಸ್ತರಣೆಗೆ ಪೂರಕ ಅಲೆ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬಂದರಿನ ವಿಸ್ತರಣೆಯಿಂದ ಮೀನುಗಾರಿಕೆಗೆ ಅಡ್ಡಿಯುಂಟಾಗುವುದಲ್ಲದೇ ಕಾರವಾರ ಬೀಚ್ ಸಹ ಯೋಜನೆಯಿಂದ ನಾಶವಾಗಲಿದೆ ಎಂದು ಮೀನುಗಾರರು ಹಾಗೂ ವಿವಿಧ ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ.

ಈ ಹಿನ್ನೆಲೆಯಲ್ಲಿ ಯೋಜನೆ ವಿರೋಧಿಸಿ ಮೀನುಗಾರರು ವಿವಿಧ ಸಂಘಟನೆಗಳ ಸಹಕಾರದಲ್ಲಿ ಗುರುವಾರ ಕಾರವಾರ ಬಂದ್‌ಗೆ ಕರೆ ನೀಡಿವೆ. ಬಂದ್‌ ಗೆ ಬೆಳಿಗ್ಗೆಯಿಂದಲೇ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗಳು ಬಾಗಿಲು ತೆರೆಯದೇ ಬಂದ್‌ಗೆ ಬೆಂಬಲ ಘೋಷಿಸಿದೆ.

ರಸ್ತೆಗಿಳಿಯದ ಬಸ್: ಬಂದ್ ಕಾರಣ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹೊರ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಬರುವ ಬಸ್‌ಗಳು ಮಾತ್ರ ನಗರಕ್ಕೆ ಆಗಮಿಸುತ್ತಿವೆ. ಸಿಟಿ ಬಸ್, ಲೋಕಲ್ ಬಸ್‌ಗಳು ಓಡಾಟ ನಿಲ್ಲಿಸಿವೆ. ಟೆಂಪೋ, ರಿಕ್ಷಾ ಯೂನಿಯನ್‌ಗಳು ಸಹ ಬಂದ್‌ಗೆ ಬೆಂಬಲ ಘೋಷಿಸಿದ್ದರಿಂದ ಬೆಳಗ್ಗೆಯಿಂದ ಯಾವುದೇ ರಿಕ್ಷಾ, ಟೆಂಪೊ ರಸ್ತೆಗಿಳಿಯಲಿಲ್ಲ. ಬಸ್, ಟೆಂಪೋ ಹಾಗೂ ರಿಕ್ಷಾ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು.

ಕಾರವಾರ ಬಂದ್‌ನ ಪರಿಸ್ಥಿತಿಯನ್ನು ಅವಲೋಕಿಸಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಗಮಿಸಿದ ಇತರ ತಾಲೂಕಿನ ಮೀನುಗಾರರು
ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರರು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ ಕಾರವಾರ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.‌ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೀನುಗಾರ ಸಂಘಟನೆಗಳು ಮುಖಂಡರು ಕಾರವಾರಕ್ಕೆ ಆಗಮಿಸುತ್ತಿದ್ದಾರೆ.

ಪೊಲೀಸ್ ಬಂದೋಬಸ್ತ್

6 ಕೆಎಸ್‌ಆರ್‌ಪಿ, 8 ಡಿಆರ್ ಹಾಗೂ ಒಟ್ಟು 700ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗಿದೆ.  ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಅತೀ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸ್ವತಃ ಪರಿಸ್ಥಿಯನ್ನು ಅವಲೋಕಿಸುತ್ತಿದ್ದಾರೆ.

ಅಹಿತಕರ ಘಟನೆ ನಡೆದರೆ ಸಂಘಟಕರೇ ಹೊಣೆ
ಪ್ರತಿಭಟನೆ, ಮೆರವಣಿಗೆಯ ವೇಳೆ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಯಾವುದೇ ಹಾನಿ ಉಂಟು ಮಾಡುವಂತಿಲ್ಲ. ಒಂದು ವೇಳೆ ಹಾನಿಯುಂಟು ಮಾಡಿದರೆ ಕಾರವಾರ ಬಂದ್‌ಗೆ ಕರೆ ಕೊಟ್ಟ ಸಂಘಟಕರು ಹಾಗೂ ಮುಖಂಡರೇ ಜವಾಬ್ದಾರರಾಗಿರುತ್ತಾರೆ ಎಂದು ಎಸ್. ಪಿ. ಶಿವಪ್ರಕಾಶ ದೇವರಾಜು ಹೇಳಿದ್ದಾರೆ.

No Comments

Leave A Comment