Log In
BREAKING NEWS >
ಮಂಗಳೂರು:ಡಿಸೆಂಬರ್‌ನಿಂದ ಮರಳುಗಾರಿಕೆ ಸ್ಥಗಿತ; ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ....

ಸ್ವಾತಂತ್ರ್ಯದ ಫ‌ಲ ಸಮಾನ ಹಂಚಿಕೆಯಾದರೆ ಬಲಿಷ್ಠ ಭಾರತ: ಪಿ.ಬಿ. ಆಚಾರ್ಯ

ಉಡುಪಿ: ಈಶಾನ್ಯ ಭಾರತದ ಅಭಿವೃದ್ಧಿಗೆ ಭಾರತದ ಇತರ ಭಾಗದವರು ಕಟಿಬದ್ಧರಾಗಬೇಕು. ಭಾರತ ಬಲಿಷ್ಠವಾಗಲು ಸ್ವಾತಂತ್ರ್ಯದ ಫ‌ಲ ಸಮಾನವಾಗಿ ಹಂಚಿಕೆ ಯಾಗಬೇಕು ಎಂದು ನಾಗಾಲ್ಯಾಂಡ್‌ನ‌ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ಕರೆ ನೀಡಿದರು.

ಮಣಿಪಾಲದ ಹೊಟೇಲ್‌ ವ್ಯಾಲಿವ್ಯೂ ಆವರಣದಲ್ಲಿ ಶನಿವಾರ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಮಣಿಪಾಲ ಮಾಹೆವಿ.ವಿ., ಸಿಂಡಿಕೇಟ್‌ ಬ್ಯಾಂಕ್‌, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ವತಿಯಿಂದ 2020ನೇ ಸಾಲಿನ ಹೊಸ ವರ್ಷದ ಪ್ರಶಸ್ತಿ ಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳಿದ್ದರೆ ನಾಗಾಲ್ಯಾಂಡ್‌ ರಾಜ್ಯದಲ್ಲಿ ಒಂದೂ ಇಲ್ಲ. ಅಲ್ಲಿ ಪ್ರಾಕೃತಿಕ ಸಂಪನ್ಮೂಲ ಹೇರಳವಾಗಿದೆ. ಏತನ್ಮಧ್ಯೆ ಅರುಣಾಚಲ ಪ್ರದೇಶವನ್ನು ಚೀನ ತನ್ನದೆನ್ನುತ್ತಿದೆ. ನಾಗಾಲ್ಯಾಂಡ್‌ನ‌ಲ್ಲಿ 200
ಪ್ರತ್ಯೇಕತಾವಾದಿಗಳಿದ್ದಾರೆ. ಅಸ್ಸಾಂನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರಿದ್ದಾರೆ. ಹೀಗಾಗಿ ಈಶಾನ್ಯ ರಾಜ್ಯಗಳಲ್ಲಿ ಸೂಕ್ತ ಅಭಿವೃದ್ಧಿ ಸಾಧಿಸುವುದು ಎಲ್ಲ ರಾಷ್ಟ್ರೀಯವಾದಿ ಸಮಾನ ಮನಸ್ಕರ ಕರ್ತವ್ಯವಾಗಿದೆ ಎಂದು ಪಿ.ಬಿ. ಆಚಾರ್ಯ ಹೇಳಿದರು.

ಭಾರತ ಶ್ರೀಮಂತವಾಗಿದ್ದರೂ ಭಾರತೀಯರು ಬಡವರಾಗಿದ್ದಾರೆ. ಶೇ. 6ರಷ್ಟು ಜನರು ಶೇ. 80ರಷ್ಟು ಸಂಪತ್ತನ್ನು ಹೊಂದಿ ದ್ದಾರೆ. ನಮ್ಮ ಶೇ. 60 ವಿಶ್ವವಿದ್ಯಾನಿಲಯಗಳ ಪದವೀಧರರು ಉದ್ಯೋಗ ರಹಿತರಾ ಗಿದ್ದಾರೆ. ನಮ್ಮ ಯುವಕರು ಉದ್ಯೋಗಾಕಾಂಕ್ಷಿಗಳಾಗದೆ ಉದ್ಯೋಗ ನೀಡುವಂತಾಗಬೇಕು. ರಾಷ್ಟ್ರ ಮೊದಲು ಎಂಬ ಪರಿಕಲ್ಪನೆ ಮೂಡಬೇಕು. ಸರಕಾರ ಗಳು ಬಡವರ ಪರ ಅನೇಕ ಯೋಜನೆಗಳು ಜಾರಿಗೊಳಿಸುತ್ತಿದ್ದರೂ ಅವು ಯಾರಿಗೆ ತಲುಪ ಬೇಕೋ ಅವರಿಗೆ ಗೊತ್ತೇ ಇರುವುದಿಲ್ಲ. ಈ ಸವಾಲನ್ನು ಯುವಕರು ಮತ್ತು ವಿ.ವಿ.ಗಳು ಕೈಗೆತ್ತಿಕೊಳ್ಳಬೇಕು ಎಂದು ಆಚಾರ್ಯ ಅವರು ಆಗ್ರಹಿಸಿದರು.

ಬಂದದ್ದೆಲ್ಲ ಬಯಸಿದ್ದಲ್ಲ
ರಾಜ್ಯದ 3ನೇ ಹಣಕಾಸು ಆಯೋಗದ ಅಧ್ಯಕ್ಷನಾಗಿದ್ದ ವೇಳೆ ಗ್ರಾಮೀಣಾಭಿವೃದ್ಧಿ ಯಲ್ಲಿ ಹೇಗೆ ಸಹಕರಿಸಬೇಕೆಂದು ವಿವರವಾದ ವರದಿ ಸಲ್ಲಿಸಿರುವುದಾಗಿ ತಿಳಿಸಿದ ಮಾಜಿ ಶಾಸಕ, ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು, ಬದುಕಿನಲ್ಲಿ ನಾನು ಬಯಸಿದ್ದು ಬಹಳವಿದೆ. ಬಂದದ್ದು ಬಹಳವಿದೆ. ಬಂದದ್ದೆಲ್ಲ ನಾನು ಬಯಸಿದ್ದಲ್ಲ ಎಂದರು.

ಬ್ಯಾಂಕಿಂಗ್‌ನಲ್ಲಿ ಬದಲಾವಣೆ
ಬ್ಯಾಂಕಿಂಗ್‌ ವ್ಯವಸ್ಥೆ ನಾಲ್ಕು ದಶಕಗಳಲ್ಲಿ ಭಾರೀ ಬದಲಾವಣೆ ಕಾಣುತ್ತಿದೆ. ವಿಶ್ವಾಸದ ಸ್ಥಿತಿಯಿಂದ ಸಂಶಯ ಪಡುವ ಸ್ಥಿತಿ, ಸಕ್ರಿಯ ಸ್ಥಿತಿಯಿಂದ ಮತ್ತೆ ಕ್ರಿಯಾಶೀಲರಾಗುವ ಸ್ಥಿತಿ, ಮುಕ್ತ ಮನೋಭಾವನೆಯಿಂದ ಸ್ವರಕ್ಷಣೆ ಮಾಡಿಕೊಳ್ಳುವ ಸ್ಥಿತಿಗೆ ಬದಲಾವಣೆಗಳು ಆಗುತ್ತಿವೆ. ಅವಿಭಜಿತ ದ.ಕ. ಜಿಲ್ಲೆಯ ಐದು ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಒಂದು ಖಾಸಗಿ ಬ್ಯಾಂಕ್‌ ಮುಂದೆ ಒಂದು ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಒಂದು ಖಾಸಗಿ ಬ್ಯಾಂಕ್‌ ಉಳಿಯಲಿದ್ದರೂ ನಮ್ಮ ಬ್ಯಾಂಕಿಂಗ್‌ ಪರಂಪರೆ ಮುಂದುವರಿಯಲಿದೆ ಎಂದು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ.ಆರ್‌. ಕಾಮತ್‌ ವಿಶ್ವಾಸ ವ್ಯಕ್ತಪಡಿಸಿದರು.

ಶ್ರಮಕ್ಕೆ ಗೌರವ
ನನಗೆ ಆದರ್ಶಪ್ರಾಯರಾದವರು ಎಂದೂ ಸಂಪತ್ತು ಮತ್ತು ಕೀರ್ತಿಯ ಬೆನ್ನ ಹಿಂದೆ ಬಿದ್ದವರಲ್ಲ. ನಾನೂ ಅದರಂತೆ ಬಾಳುತ್ತಿದ್ದೇನೆ. ಶ್ರಮ ಗುರುತಿಸಿ ಕೊಡುವ ಕಿಂಚಿತ್ತು ಗೌರವವೂ ಬಹು ದೊಡ್ಡ ಗೌರವವೆಂದು ನನ್ನ ಭಾವನೆ ಎಂದು ಮೂಡಬಿದಿರೆ ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಅಭಿಪ್ರಾಯಪಟ್ಟರು.

ದಿನದ ಕೊನೆಯಲ್ಲಿ ಸ್ವವಿಶ್ಲೇಷಣೆ
ನಾನು ಯಾವತ್ತೂ ನನ್ನ ಸುತ್ತಮುತ್ತ ಸಕಾರಾತ್ಮಕ ಮನೋಭಾವವದವರನ್ನು ಬಯಸುತ್ತೇನೆ. ಇದರಿಂದ ನಾನೂ ಹಾಗೆಯೇ ಆಗುತ್ತೇನೆ. ನಾನು ನನ್ನ ಕೆಲಸದಲ್ಲಿ ಸಂತೃಪ್ತಿ ಕಾಣುತ್ತೇನೆ. ಓದು, ಪ್ರವಾಸ, ಕ್ರೀಡೆ, ಸಂಗೀತ ಇತ್ಯಾದಿ ಹವ್ಯಾಸಗಳಿಗೆ ಆದ್ಯತೆ ನೀಡುತ್ತೇನೆ. ನಾವು ಪ್ರತಿನಿತ್ಯ ಕೆಲಸ ಮುಗಿಸುವಾಗ ನನ್ನಿಂದ ಎಷ್ಟು ಉತ್ತಮ ಕೆಲಸವಾಗಿದೆ ಎಂಬ ಸ್ವ ವಿಶ್ಲೇಷಣೆ ಮಾಡಿಕೊಳ್ಳಬೇಕು ಎಂದು ಮಣಿಪಾಲ ಕೆಎಂಸಿ ಪ್ರಾಧ್ಯಾಪಕ ಡಾ| ಪ್ರತಾಪ್‌ ಕುಮಾರ್‌ ನಾರಾಯಣ್‌ ಹೇಳಿದರು.

ಡಾ| ಎಚ್‌.ಎಸ್‌. ಬಲ್ಲಾಳ್‌ ಸ್ವಾಗತಿಸಿ, ಶೃಂಗೇರಿ ಜೆಸಿಬಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ. ಸ್ವಾಮಿ ವಂದಿಸಿದರು. ಎಂಸಿಎಚ್‌ಪಿ ಸಹಾಯಕ ಪ್ರಾಧ್ಯಾಪಕಿ ನಿವೇದಿತಾ ಎಸ್‌. ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

ಪಿ.ಬಿ. ಆಚಾರ್ಯರಿಗೆ ಮಣಿಪಾಲ ಅಕಾಡೆಮಿ ರಿಜಿಸ್ಟ್ರಾರ್‌ ಡಾ| ರಂಜನ್‌ ಆರ್‌. ಪೈ ಮತ್ತು ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ, ಎ.ಜಿ. ಕೊಡ್ಗಿಯವರಿಗೆ ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ.ನ ಆಡಳಿತ ನಿರ್ದೇಶಕ ಟಿ.ಸತೀಶ್‌ ಯು. ಪೈ, ಡಾ| ಟಿಎಂಎ ಪೈ ಪ್ರತಿಷ್ಠಾನದ ಕಾರ್ಯದರ್ಶಿ ಟಿ.ಅಶೋಕ್‌ ಪೈ, ಕೆ.ಆರ್‌. ಕಾಮತ್‌ ಅವರಿಗೆ ಸಿಂಡಿಕೇಟ್‌ ಬ್ಯಾಂಕ್‌ ವಲಯ ಪ್ರಬಂಧಕ ಭಾಸ್ಕರ ಹಂದೆ ಮತ್ತು ಟಿ. ಸತೀಶ್‌ ಯು. ಪೈ, ಡಾ| ಮೋಹನ ಅಳ್ವ ಮತ್ತು ಡಾ| ಪ್ರತಾಪ್‌ಕುಮಾರ್‌ ಅವರಿಗೆ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮತ್ತು ಕುಲಪತಿ ಡಾ| ಎಚ್‌.ವಿನೋದ ಭಟ್‌ ಪ್ರಶಸ್ತಿ ಪ್ರದಾನ ಮಾಡಿದರು.

No Comments

Leave A Comment