Log In
BREAKING NEWS >
ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನೇರಪ್ರಸಾರ ಕಾರ್ಯಕ್ರಮಕ್ಕೆ ಸಹಕರಿಸಿದ ದೇವಸ್ಥಾನದ ಆಡಳಿತ ಮ೦ಡಳಿಗೆ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯವರಿಗೆ ಮತ್ತು ಜಾಹೀರಾತನ್ನು ನೀಡಿ ಸಹರಿಸಿದ ಎಲ್ಲಾ ಜಾಹೀರಾತುದಾರರಿಗೆ ಕರಾವಳಿ ಕಿರಣ ಡಾಟ್ ಬಳಗದ ವತಿಯಿ೦ದ ಧನ್ಯವಾದಗಳು ಹಾಗೂ ಏಳುದಿನಗಳ ನಮ್ಮ ಅ೦ತರ್ಜಾಲ ಪತ್ರಿಕೆಯನ್ನು ವೀಕ್ಷಿಸಿದ ಎಲ್ಲಾ ಓದುಗರಿಗೆ,ಅಭಿಮಾನಿಗಳಿಗೆ ಅಭಿನ೦ದನೆಗಳನ್ನು ಸಲ್ಲಿಸುತ್ತೇವೆ.

ವಿಕ್ರಮ್‌ ಅವಶೇಷ ಪತ್ತೆ ಮಾಡಿದ ಭಾರತೀಯ ಟೆಕ್ಕಿ

ವಾಷಿಂಗ್ಟನ್‌ : ಭಾರತೀಯ ಬಾಹ್ಯಾ ಕಾಶ ಸಂಸ್ಥೆಯ (ಇಸ್ರೋ) ‘ಚಂದ್ರಯಾನ-2’ ಯೋಜನೆಯಡಿ ಚಂದ್ರನಲ್ಲಿಗೆ ತೆರಳಿ ಅಲ್ಲಿ ಚಂದ್ರನ ಮೇಲ್ಮೈ ಮೇಲೆ ಇಳಿಯುವಾಗ ನಾಪತ್ತೆಯಾಗಿದ್ದ ‘ವಿಕ್ರಮ್‌’ ಲ್ಯಾಂಡರ್‌ರ ಅವಶೇಷಗಳನ್ನು ಚೆನ್ನೈ ಮೂಲದ ಷಣ್ಮುಗ ಸುಬ್ರಹ್ಮಣ್ಯಂ ಎಂಬ ವಿಜ್ಞಾನಿ ಪತ್ತೆ ಹಚ್ಚಿದ್ದಾರೆ. ಇವರು ನೀಡಿದ ಮಹತ್ವದ ಮಾಹಿತಿ ಆಧಾರದ ಮೇರೆಗೆ ವಿಕ್ರಮ್‌ ಲ್ಯಾಂಡರ್‌ ಹುಡುಕಾಟದಲ್ಲಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಸಂಸ್ಥೆ ಸಹ ವಿಕ್ರಮ್‌ ಪತನವಾಗಿರುವುದನ್ನು ಖಚಿತಪಡಿಸಿದೆ.

ಸೆ. 7ರಂದು ಚಂದ್ರನ ಮೇಲೆ ಇಳಿಯುವಾಗ ನಾಪತ್ತೆಯಾಗಿದ್ದ ವಿಕ್ರಮ್‌ಗೆ ಏನಾಯ್ತು ಎಂಬುದು ಈವರೆಗೆ ತಿಳಿದುಬಂದಿರಲಿಲ್ಲ. ಅದು ನಾಶಗೊಂಡಿದೆ ಎಂಬ ಅನುಮಾನ ಹುಟ್ಟಿದ್ದವಾದರೂ ಆ ಬಗ್ಗೆ ಕರಾರುವಾಕ್‌ ಸಾಕ್ಷ್ಯಾಧಾರ ಸಿಕ್ಕಿರಲಿಲ್ಲ. ಹಾಗಾಗಿ, ಇಸ್ರೋ, ನಾಸಾಗಳು ವಿಕ್ರಮ್‌ ಹುಡುಕಾಟದಲ್ಲಿ ತೊಡಗಿದ್ದವು. ದಶಕಗಳ ಹಿಂದೆ ನಾಸಾ ಹಾರಿ ಬಿಟ್ಟಿರುವ ಲೂನಾರ್‌ ಆರ್ಬಿಟರನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. ಅದರಿಂದ ಬಂದ ಫೋಟೋಗಳನ್ನು ಪರಿಗಣಿಸಿ, ಸೆ. 7ರ ಮುನ್ನ ಹಾಗೂ ಅನಂತರದ ದಿನದಲ್ಲಿ ವಿಕ್ರಮ್‌ ಇಳಿದ ಸ್ಥಳದಲ್ಲಿ ಏನಾದರೂ ವ್ಯತ್ಯಾಸ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿತ್ತು.

ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದ ಷಣ್ಮುಗ, ವಿಕ್ರಮ್‌ ಇಳಿದ ಜಾಗವನ್ನು ಪತ್ತೆ ಹಚ್ಚಿ ಅದನ್ನು ನಾಸಾ ಗಮನಕ್ಕೆ ತಂದರು. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿ, ವಿಕ್ರಮ್‌ ಲ್ಯಾಂಡರ್‌, ಅಸಲಿಗೆ ತಾನು ಇಳಿಯಬೇಕಿದ್ದ ಜಾಗದಿಂದ ವಾಯವ್ಯ ದಿಕ್ಕಿಗೆ 750 ಮೀ. ಚಲಿಸಿ ಅಲ್ಲಿ ಚಂದ್ರನ ನೆಲಕ್ಕೆ ಅಪ್ಪಳಿಸಿರುವುದು ತಿಳಿದುಬಂದಿದೆ.

ಯಾರು ಈ ಷಣ್ಮುಗ ಸುಬ್ರಮಣ್ಯಂ?
ತಮಿಳುನಾಡಿನ ಮಧುರೈನವರಾದ 33 ವರ್ಷದ ಷಣ್ಮುಗ ಸುಬ್ರಮಣ್ಯಂ ಮೂಲತಃ ಮೆಕ್ಯಾನಿಕಲ್‌ ಇಂಜಿನಿಯರ್‌. ಲೆನ್ನಾಕ್ಸ್‌ ಇಂಡಿಯಾ ಟೆಕ್ನಾಲಜಿ ಸೆಂಟರ್‌ನಲ್ಲಿ ಆ್ಯಪ್‌ ಡೆವಲಪರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿಯುಳ್ಳ ಅವರು ಚೆನ್ನೈನಲ್ಲಿ ವಿಕ್ರಮ್‌ ಹುಡುಕಾಟ ಕಾರ್ಯದಲ್ಲಿ ನಾಸಾ ಹಾಗೂ ಇಸ್ರೋ ಜತೆಗೆ ಕೈ ಜೋಡಿಸಿದ್ದರು.

ತಮ್ಮ ಲ್ಯಾಬ್‌ನಲ್ಲಿ ಕುಳಿತು ಲೂನಾರ್‌ ಆರ್ಬಿಟರ್‌ನಿಂದ ಬರುತ್ತಿದ್ದ ಫೋಟೋಗಳನ್ನು ದಿನಕ್ಕೆ 4ರಿಂದ 6 ಗಂಟೆ ಪರಿಶೀಲಿಸುತ್ತಿದ್ದುದಾಗಿ ಅವರೇ ಹೇಳಿದ್ದಾರೆ. ಪ್ರತಿ ದಿನ ಕೆಲಸ ಮುಗಿಸಿ ಮನೆಗೆ ಬಂದ ಮೇಲೆಯೂ ರಾತ್ರಿ 10ರಿಂದ 2ರವರೆಗೆ ಮತ್ತು ಬೆಳಗ್ಗೆ 8ರಿಂದ 10ರವರೆಗೆ ಎರಡು ಲ್ಯಾಪ್‌ಟಾಪ್‌ ಮೂಲಕ ಡೇಟಾ ವಿಶ್ಲೇಷಣೆ ಮಾಡುತ್ತಿದ್ದೆ. ಬಾಹ್ಯಾಕಾಶ ಕುರಿತು ಮೊದಲಿಂದಲೂ ನನಗೆ ಬಹಳ ಆಸಕ್ತಿಯಿದ್ದ ಕಾರಣ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ವಿಕ್ರಮ್‌ ಪತ್ತೆಗೆ ಯತ್ನಿಸಿದ್ದೇನೆ. ಕೊನೆಗೂ ಅದು ಫ‌ಲ ನೀಡಿತು ಎನ್ನುತ್ತಾರೆ ಷಣ್ಮುಗ.

ನಾಗರಿಕ ವಿಜ್ಞಾನಕ್ಕೆ ಉತ್ತೇಜನ
ಷಣ್ಮುಗರವರ ಗಮನ ಸೆಳೆಯುವ ಈ ಪ್ರಯತ್ನದಿಂದಾಗಿ, ಗಹನವಾದ ವೈಜ್ಞಾನಿಕ ಸಂಶೋಧನೆಗಳಿಗೆ ವಿಜ್ಞಾನದಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿರುವ ಸಾರ್ವಜನಿಕರನ್ನು (ಹವ್ಯಾಸಿ ವಿಜ್ಞಾನಿಗಳು) ಒಗ್ಗೂಡಿಸಿಕೊಳ್ಳುವ ಪರಿಕಲ್ಪನೆಗೆ ಮಹತ್ತರ ತಿರುವು ಸಿಕ್ಕಂತಾಗಿದೆ. ಭಾರತದ ಮಟ್ಟಿಗಂತೂ ಇದು ಅಪರೂಪದ ಪರಿಕಲ್ಪನೆಯಾಗಿದ್ದು, ಇದನ್ನು ಉತ್ತೇಜಿಸಿದರೆ, ಇಂಥ ಹಲವಾರು ಸಾರ್ವಜನಿಕ ವಿಜ್ಞಾನಿಗಳನ್ನು ಬೆಳೆಸಿದಂತಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.

No Comments

Leave A Comment