ಉಡುಪಿ: ನಗರದ ತ್ರಿವೇಣಿ ಜಂಕ್ಷನ್ ಬಳಿ ಇರುವ ಪ್ಲೇ ಝೋನ್ ಮೊಬೈಲ್ ಅಂಗಡಿಯಲ್ಲಿ ನ.5ರಂದು ರಾತ್ರಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಜ್ಯ ಕಳ್ಳರ ತಂಡವನ್ನು ಡಿ.1ರಂದು ಪೊಲೀಸರು ಬಂಧಿಸಿದ್ದಾರೆ. ನ.5ರಂದು ಮೊಬೈಲ್ ಅಂಗಡಿಯಿಂದ 8,34,990 ರೂ. ಬೆಲೆ ಬಾಳುವ ಮೊಬೈಲ್ ಫೋನ್ಗಳು ಹಾಗೂ ನಗದು ಕಳವಾಗಿದ್ದವು.
ಅಂತಾರಾಜ್ಯ ಕಳವು ತಂಡದ ಸದಸ್ಯರಾದ ಮಹಾರಾಷ್ಟ್ರದ ರಝಾಕ್ ಅಸ್ಲಾಂ ಮುಜಾವರ್, ಕೊಪ್ಪಳದ ರಾಜಾಸಾಬ್ ನಾಯಕ್, ಬಿಹಾರದ ದೀಪಕ್ ಪ್ರಸಾದ್ರನ್ನು ಬಂಧಿಸಿರುವ ಪೊಲೀಸರು, ಸುಮಾರು 3 ಲ.ರೂ. ಮೌಲ್ಯದ 16 ಮೊಬೈಲ್ಗಳು, 22 ಸಾ. ರೂ., ಕಳವಿಗೆ ಉಪಯೋಗಿಸಿದ್ದ ಸ್ಕ್ರೂ ಡ್ರೈವರ್, ಕಟ್ಟಿಂಗ್ ಪ್ಲೇಯರ್, ಎರಡು ಬ್ಯಾಗ್, ಮಾಸ್ಕ್, ಕ್ಯಾಪ್ ಮುಂತಾದವುಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ನಿಶಾ ಜೇಮ್ಸ್ ಆದೇಶ ದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಡಿವೈಎಸ್ಪಿ ಟಿ.ಆರ್. ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಸಿಐ ಮಂಜುನಾಥ, ಮಲ್ಪೆ ಠಾಣೆಯ ಎಸ್ ಐ ತಿಮ್ಮೇಶ್, ಎಎಸ್ಐ ರವಿಚಂದ್ರ, ಸಿಬಂದಿ ವರ್ಗದ ಡಿಸಿಐಬಿಯ ರಾಮು ಹೆಗ್ಡೆ, ರಾಘವೇಂದ್ರ, ನಗರ ಠಾಣೆಯ ಲೋಕೇಶ್, ಬಾಲಕೃಷ್ಣ, ಇಮ್ರಾನ್, ಸಂತೋಷ್ ರಾಥೋಡ್ ಅವರು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.