Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 91ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ.......ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಮಹಾರಾಷ್ಟ್ರ, ಹರಿಯಾಣದಲ್ಲಿ ಪಕ್ಷಾಂತರಿಗಳ ಸೋಲು: ಅನರ್ಹ ಶಾಸಕರ ಪಾಳಯದಲ್ಲಿ ತಳಮಳ

ಬೆಂಗಳೂರು: ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸದೇ ಇರುವುದು ಇದೀಗ ಕರ್ನಾಟಕದಲ್ಲಿನ ಅನರ್ಹ ಶಾಸಕರ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮುಂಬರುವ ಉಪಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯನ್ನೇರಿ ಸುಲಭವಾಗಿ ಬಿಜೆಪಿಯಿಂದ ಗೆದ್ದು ಬರಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಅನರ್ಹ ಶಾಸಕರಿಗೆ ಈ ಫಲಿತಾಂಶ ತುಸು ಚಿಂತೆಗೀಡು ಮಾಡಿದೆ.

ತಮ್ಮ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿನ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದು ಹೊರಬಂದಾಯ್ತು, ಅದಕ್ಕಾಗಿ ಶಾಸಕತ್ವವನ್ನೂ ಕಳೆದುಕೊಂಡಿದ್ದಾಯ್ತು. ಆದರೆ, ಕಳೆದ 3 ತಿಂಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದೆ ಈಗ ಒಂದು ತಾರ್ಕಿತ ಅಂತ್ಯ ಕಾಣುವ ಸಂದರ್ಭ ಬಂದೊದಗಿದೆ.

ಇಷ್ಟೆಲ್ಲಾ ಕಷ್ಟನಷ್ಟ ಅನುಭವಿಸಿದರೂ ಮುಂದೆ ಒಳ್ಳೆಯದಾಗಲಿದೆ. ಸುಲಭವಾಗಿ ಬಿಜೆಪಿಯಿಂದ ಗೆದ್ದು ಬರಬಹುದು ಎಂಬ ಕನಸು ಕಾಣುತ್ತಿದ್ದ ಅನರ್ಹ ಶಾಸಕರಿಗೆ ಗುರುವಾರ ಹೊರಬಿದ್ದ ಎರಡು ರಾಜ್ಯಗಳ ಫಲಿತಾಂಶ ನಿರಾಸೆ ಮೂಡಿಸಿದ್ದರಲ್ಲಿ ಅನುಮಾನವೇ ಇಲ್ಲ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲೂ ಅದೇ ಪಕ್ಷದ ಸರ್ಕಾರವಿದೆ. ಜನರು ಸುಲಭವಾಗಿ ತಮ್ಮನ್ೇನು ಮತ್ತೆ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆಯನ್ನು ಈ ಶಾಸಕರು ಬಲವಾಗಿ ಹೊಂದಿದ್ದರು. ಆದರೆ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದು ಚುನಾವಣೆ ಎದುರಿಸಿದರೂ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಲಿಲ್ಲ. ಅದು ಆಯಾ ರಾಜ್ಯ ಸರ್ಕಾರಗಳ ವೈಫಲ್ಯವೋ ಅಥವಾ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಆಡಳಿತದ ವಿರುದ್ದದ ಪರಿಣಾಮವೋ ಎಂಬುದನ್ನು ವಿಶ್ಲೇಷಿಸುವಲ್ಲಿ ಅನರ್ಹ ಶಾಸಕರು ನಿರತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಒಂದಂತೂ ಸತ್ಯ, ಅನರ್ಹ ಶಾಸಕರು ಮೊದಲು ಹಾಕಿದ್ದ ಲೆಕ್ಕಾಚಾರದಂತೆ ಎಲ್ಲವೂ ನಡೆಯುವುದು ಅನುಮಾನ ಎಂಬ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಮೊದಲು ನ್ಯಾಯಾಲಯದಲ್ಲಿ ಜಯ ಗಳಿಸಬೇಕಾಗಿದೆ. ನಂತರ ಉಪ ಚುನಾವಣೆ ಹೊತ್ತಿಗೆ ಪರಿಸ್ಥಿತಿ ಅವರ ಪರವಾಗಿ ತಿರುಗಿದರೆ ಗೆಲವು ಸುಲಭವಾಗಿ ದಕ್ಕಲಿದೆ. ಇಲ್ಲದಿದ್ದರೆ ಅವರ ರಾಜಕೀಯ ಭವಿಷ್ಯವೇ ಅತಂತ್ರವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

No Comments

Leave A Comment