Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನಗರ ಭಜನೆಯು ಭಾನುವಾರ ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಡಲಿದೆ..........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ದರ್ಬಾರ್‌ ಸಭೆ ಅಪರಾಹ್ನ ,ಪ್ಲಾಸ್ಟಿಕ್‌ಮುಕ್ತ,15 ದಿನಗಳಿಗೊಮ್ಮೆ ಹೊರೆಕಾಣಿಕೆ

ಉಡುಪಿ: ಎಲ್ಲ ಮಠಗಳ ಶ್ರೀಪಾದರ ಒಪ್ಪಿಗೆ ಪಡೆದು ಇದೇ ಮೊದಲ ಬಾರಿಗೆ ಅದಮಾರು ಪರ್ಯಾಯದ ದರ್ಬಾರ್‌ ಸಭೆಯನ್ನು ಬೆಳಗ್ಗಿನ ಜಾವದ ಬದಲು ಅಪರಾಹ್ನ 3 ಗಂಟೆಗೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಪೂರ್ಣಪ್ರಜ್ಞ ಆಡಿಟೋರಿಯಂನ ಮಿನಿ ಹಾಲ್‌ನಲ್ಲಿ ಶನಿವಾರ ನಡೆದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯ ಪರ್ಯಾಯವನ್ನು ವಿಭಿನ್ನವಾಗಿ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಪರ್ಯಾಯ ಉತ್ಸವದ ಮೆರವಣಿಗೆ ಎಂದಿನಂತೆ ಮುಂಜಾವವೇ ಬರಲಿದೆ. ಧಾರ್ಮಿಕ ಕಾರ್ಯಕ್ರಮಗಳೂ ಬೆಳಗ್ಗೆ ನಡೆಯುತ್ತವೆ. ಏತನ್ಮಧ್ಯೆ ದರ್ಬಾರ್‌ ಸಭೆ ನಡೆಯುತ್ತಿದ್ದರೆ ಇನ್ನೊಂದತ್ತ ಪೂಜೆಗೆ ಹೋಗುವ ಗಡಿಬಿಡಿ ಸೃಷ್ಟಿಯಾಗುತ್ತದೆ. ಹೀಗಾಗಿ ಧಾರ್ಮಿಕ ಕಾರ್ಯಕ್ರಮದ ಬಳಿಕ ಭೋಜನ ಮುಗಿದ ಬಳಿಕ ದರ್ಬಾರ್‌ ಸಭೆ ನಡೆಸಲಾಗುವುದು ಎಂದರು.

15 ದಿನಕ್ಕೊಮ್ಮೆ ಹೊರೆಕಾಣಿಕೆ
ಪರ್ಯಾಯಕ್ಕೆ ನಿರೀಕ್ಷೆಗೂ ಮೀರಿ ಹೊರೆ ಕಾಣಿಕೆ ಬರುವುದರಿಂದ ವಸ್ತುಗಳು ವ್ಯರ್ಥವಾಗುತ್ತಿವೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ 15 ದಿನಕ್ಕೊಮ್ಮೆ ಸಂಬಂಧಪಟ್ಟ ಸಮಿತಿಯ ಮೂಲಕ ಭಕ್ತರಿಂದ ಕಾಣಿಕೆ ಸ್ವೀಕರಿಸಲು ನಿರ್ಧರಿಸಲಾಗಿದೆ. ಇದು ಎರಡು ವರ್ಷ ನಿರಂತರವಾಗಿ ಮುಂದುವರಿಯಲಿದೆ. ಇದರಿಂದ ಪ್ರತೀ ಭಕ್ತರನ್ನು ವೈಯಕ್ತಿಕವಾಗಿ ಭೇಟಿಯಾಗಲೂ ಸಾಧ್ಯವಾಗುತ್ತದೆ. ಬೆಳಗ್ಗಿನ ಪೂಜೆ, ಮಧ್ಯಾಹ್ನ ಕೃಷ್ಣ ಪ್ರಸಾದ, ಸಾಯಂಕಾಲ ಆಯಾ ಊರಿನ ವಿಶೇಷ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.

ಪ್ಲಾಸ್ಟಿಕ್‌ ನಿಷೇಧ
ಪರ್ಯಾಯದ ಅವಧಿಯಲ್ಲಿ ಜಲಪೂರಣ, ಕೃಷಿಗೆ ಆದ್ಯತೆ, ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಪರ್ಯಾಯ ಇಂದು ಮಠಗಳ ಉತ್ಸವವಾಗಿ ಉಳಿದಿಲ್ಲ. ಮನೆ-ಮನಗಳ ಕಾರ್ಯಕ್ರಮವಾಗಿದೆ ಎಂದು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.

ಪರ್ಯಾಯಕ್ಕೆ ವೈಜ್ಞಾನಿಕ ಸ್ಪರ್ಶ
ಅದಮಾರು ಪರ್ಯಾಯ ಹೊಸ ಕ್ರಾಂತಿಯನ್ನು ಮಾಡಲು ಹೊರಟಿರುವುದು ಸಂತೋಷದ ವಿಷಯ. ಯೋಜನೆಗಳಿಗೆ ವೈಜ್ಞಾನಿಕ ಸ್ಪರ್ಶ ನೀಡಿರುವುದು ಶ್ಲಾಘನೀಯ. 15 ದಿನಕ್ಕೊಮ್ಮೆ ಹೊರೆಕಾಣಿಕೆ ಸ್ವೀಕರಿಸುವುದರಿಂದ ಕೊಳೆತು ಹೋಗುವ ಶೇ.30ರಷ್ಟು ಸಾಮಾನು ಉಳಿಸಲು ಸಾಧ್ಯವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಪರ್ಯಾಯ ಸಂದರ್ಭ ರಸ್ತೆ ಗುಂಡಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಮುಖ್ಯಮಂತ್ರಿಗಳ ಸಹಕಾರ ಕೋರಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್‌ ಭರವಸೆ ನೀಡಿದರು.

ಹೊಸ ಕ್ರಾಂತಿ
ಉಡುಪಿ ಪರ್ಯಾಯ ನಾಡ ಹಬ್ಬವಾಗಿ ಪರಿ ವರ್ತನೆಯಾಗುತ್ತಿದೆ. ಈ ಬಾರಿಯ ಅದಮಾರು ಮಠದ ಪರ್ಯಾಯ ಹೊಸ ಕ್ರಾಂತಿಯನ್ನು ಮೂಡಿಸಲಿದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಹಿರಿಯ ಮುಂದಾಳು ಎ.ಜಿ. ಕೊಡ್ಗಿ ಉಪಸ್ಥಿತರಿದ್ದರು. ಅದಮಾರು ಪರ್ಯಾಯ ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್‌ ಸ್ವಾಗತಿಸಿದರು.

ಮಹಿಳಾ ಸದಸ್ಯರು
ಇದೇ ಮೊದಲ ಬಾರಿ ಅದಮಾರು ಮಠದ ಪರ್ಯಾಯದ ಶ್ರೀ ಕೃಷ್ಣ ಸೇವಾ ಬಳಗದಲ್ಲಿ 6 ಮಂದಿ ಮಹಿಳಾ ಸದಸ್ಯರು ಸೇರ್ಪಡೆಯಾಗಿದ್ದಾರೆ.

No Comments

Leave A Comment