Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

“ದೃಷ್ಟಿ ನೀತಿ ಸಮಿತಿ ರಚನೆಗೆ ಚಿಂತನೆ’

ಉಡುಪಿ: ರಾಜ್ಯದಲ್ಲಿ ದೃಷ್ಟಿ ನೀತಿ ಸಮಿತಿ ರಚಿಸಿ, ಆ ಮೂಲಕ ಎಲ್ಲ ಜಿಲ್ಲೆಗಳಲ್ಲಿಯೂ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.

ಪರಿವಾರ ಸಮುದಾಯ ಅಭಿವೃದ್ಧಿ ಟ್ರಸ್ಟ್‌, ಪ್ರಸಾದ್‌ ನೇತ್ರಾಲಯ, ಸೂಪರ್‌ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್‌ ಟ್ರಸ್ಟ್‌, ಬೆಂಗಳೂರು ಎಸ್ಸಿಲಾರ್‌ ವಿಷನ್‌ ಫೌಂಡೇಶನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಬ್ಯಾಂಕ್‌ ಆಫ್ ಬರೋಡಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್‌ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಉಚಿತ ಕನ್ನಡಕ ವಿತರಣೆ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಆಸ್ಪತ್ರೆಗಳಲ್ಲಿನ ಸೇವೆಗಳನ್ನು ಗುಣಮಟ್ಟವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಬಡವರ ಆರೋಗ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಡೀ ರಾಜ್ಯದಲ್ಲಿ ವಿವಿಧ ಆರೋಗ್ಯ ಸೇವೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಪ್ರಸಾದ್‌ ನೇತ್ರಾಲಯವು ವಿವಿಧ ಕಡೆಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬಡವರಿಗೆ ದೃಷ್ಟಿ ಕೊಡುವ ಕೆಲಸ ಮಾಡುತ್ತಿದೆ. ಅದರಂತೆ ರಾಜ್ಯದಲ್ಲಿರುವ ಖಾಸಗಿ ಆಸ್ಪತ್ರೆಗಳು ಉಚಿತ ಶಿಬಿರಗಳನ್ನು ಹಮ್ಮಿಕೊಂಡು ಬಡವರಿಗೆ ನೆರವಾಗಬೇಕು ಎಂದರು.

ಜಿಲ್ಲಾಸ್ಪತ್ರೆಗೆ ಶೀಘ್ರದಲ್ಲಿ
ಭೂಮಿ ಪೂಜೆ
ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆ ಗೇರಿಸಲು ಅಗತ್ಯವಿರುವ ಹೊಸ ಕಟ್ಟಡದ ಭೂಮಿ ಪೂಜೆ ಶೀಘ್ರದಲ್ಲಿ ಮಾಡಲಾಗುತ್ತದೆ. 2009ರಲ್ಲಿ ಜಿಲ್ಲಾಸ್ಪತ್ರೆ ಯನ್ನು 250 ಹಾಸಿಗೆ ಏರಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಕಾರ್ಯ ಪೂರ್ಣಗೊಂಡಿಲ್ಲ. ಇದೀಗ ಶೀಘ್ರದಲ್ಲಿ ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ರೆಫ‌ರಲ್‌ ಲೆಟರ್‌ ರದ್ದು
ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಆಯುಷ್ಮಾನ್‌ ಭಾರತ್‌ ಹಾಗೂ ಆರೋಗ್ಯ ಕರ್ನಾಟ ಯೋಜನೆಯಡಿಯಲ್ಲಿ “3ಎ’ ತುರ್ತು ಚಿಕಿತ್ಸೆ ಪಡೆಯಲು
ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದರೆ ಸರಕಾರಿ ಆಸ್ಪತ್ರೆಯ ರೆಫ‌ರಲ್‌ ಲೆಟರ್‌ ಕಡ್ಡಾಯವಾಗಿತ್ತು. ಅದನ್ನು ಸಚಿವರು ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡಿರುವುದು ಶ್ಲಾಘನೀಯ ಎಂದರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ.ಶಂಕರ್‌ ಅವರನ್ನು ಸಚಿವ ಶ್ರೀರಾಮಲು ಸಮ್ಮಾನಿಸಿದರು. ಫ‌ಲಾನುಭವಿಗಳಿಗೆ ಕನ್ನಡಕ ವಿತರಿಸಿದರು. ಜಿ.ಪಂ. ಅಧ್ಯಕ್ಷ ದಿನಕರ್‌ ಬಾಬು, ಉಪಾಧ್ಯಕ್ಷ ಶೀಲಾ ಕೆ.ಶೆಟ್ಟಿ, ಮಾಜಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌, ಎಸ್ಸಿಲಾರ್‌ ವಿಷನ್‌ ಫೌಂಡೇಶನ್‌ ಧರ್ಮ ಪ್ರಸಾದ್‌ ರೈ, ಮಣಿಪಾಲ ಮಾಹೆ ಸಹಕುಲಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್‌ ಹೆಗ್ಡೆ, ಬಿಜೆಪಿ ಮುಖಂಡರಾದ ಸುರೇಶ್‌ ಗುರ್ಮೆ ಶೆಟ್ಟಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಕೆ. ಕೃಷ್ಣಪ್ರಸಾದ್‌ ಸ್ವಾಗತಿಸಿದರು.

No Comments

Leave A Comment