Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನಗರ ಭಜನೆಯು ಭಾನುವಾರ ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಡಲಿದೆ..........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಆರು ದಿನ ಕೋಮಾದಲ್ಲಿ ಮಲಗಿದ್ದ ವಿಶ್ವನಾಥ ಚಿನ್ನ ಎತ್ತಿದ!

ಕುಂದಾಪುರ: ಸಾಧನೆ ಅತ್ಯದ್ಭುತ ಸಂಗತಿ. ಅದರ ಹಿಂದೆ ನೋವಿನ ಮತ್ತು ಸ್ಫೂರ್ತಿಯ ಕತೆಗಳಿರುತ್ತವೆ. ಅಂಥವುಗಳಲ್ಲಿ ಒಂದು ಕುಂದಾಪುರದ ವಿಶ್ವನಾಥ ಭಾಸ್ಕರ ಗಾಣಿಗ ಅವರದು.

ಕೆನಡದಲ್ಲಿ ನಡೆದ ಪವರ್‌ ಲಿಫ್ಟಿಂಗ್‌ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಬುಧವಾರವಷ್ಟೇ ಅವರು ಹೊಸ ದಾಖಲೆ ನಿರ್ಮಿಸಿ ಬಂಗಾರ ಗೆದ್ದಿದ್ದಾರೆ. ಇದೇ ವಿಶ್ವನಾಥ ಗಾಣಿಗರು ಕಳೆದ ವರ್ಷದ ಮಾರ್ಚ್‌ ತಿಂಗಳಲ್ಲಿ ಆರು ದಿನಗಳ ಕಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕೋಮಾ ಸ್ಥಿತಿಯಲ್ಲಿ ನಿಶ್ಚಲನಾಗಿ ಮಲಗಿದ್ದರು.

ಬೂದಿಯಿಂದ ಮೇಲೆದ್ದ ಫೀನಿಕ್ಸ್‌ ಹಕ್ಕಿಯಂಥ ವಿಶ್ವನಾಥ ಗಾಣಿಗರು ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಾಳಿಕೆರೆಯವರು.

 

ಸತತ ಪರಿಶ್ರಮದಿಂದ ಚೇತರಿಸಿಕೊಂಡವರೀಗ ಪವರ್‌ ಲಿಫ್ಟಿಂಗ್‌ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಡೆಡ್‌ಲಿಫ್ಟ್‌ನಲ್ಲಿ ಬರೋಬ್ಬರಿ 327.5 ಕೆಜಿ ಭಾರ ಎತ್ತಿ ಕೂಟದ ಹೊಸ ದಾಖಲೆ ನಿರ್ಮಿಸಿ  ದ್ದಾರೆ. 2011ರಲ್ಲಿ ಇಂಗ್ಲೆಂಡಿನ ಸ್ಟೀಫ‌ನ್‌ ಮ್ಯಾನ್ಯುವೆಲ್‌ ನಿರ್ಮಿಸಿದ್ದ 315 ಕೆಜಿ ಎತ್ತು ಗಡೆಯ ದಾಖಲೆ ಮುರಿದುಹೋಗಿದೆ. ಸ್ನ್ಯಾಚ್‌ನಲ್ಲಿ 295.1 ಕೆಜಿ, ಬೆಂಚ್‌ಪ್ರಸ್‌ನಲ್ಲಿ 180 ಕೆಜಿ ಭಾರವೆತ್ತಿ 2 ಬೆಳ್ಳಿ ಪದಕವನ್ನೂ ಗೆದ್ದಿದ್ದಾರೆ. ಒಟ್ಟಾರೆ 802.5 ಕೆಜಿ ಎತ್ತಿದ ಸಾಧನೆಯೊಂದಿಗೆ ಸಮಗ್ರ ಚಿನ್ನದ ಪದಕವೂ ಅವರ ಕೊರಳ ಹಾರವಾಗಿದೆ.

ಮಾರ್ಚ್‌ ಮೂರರ ದುರ್ಘ‌ಟನೆ
ಅದು 2018ರ ಮಾ.3. ಗಾಣಿಗರು ಬೆಂಗಳೂರಿ ನಿಂದ ಊರಿಗೆ ಬರು ತ್ತಿದ್ದರು. ಅವರಿದ್ದ ವೋಲ್ವೊ ಬಸ್‌ಗೆ ಮಂಗಳೂರಿನ ಹೊರವಲಯದ ಬೈಕಂಪಾಡಿ ಬಳಿ ಕ್ರೇನ್‌ ಢಿಕ್ಕಿ ಹೊಡೆದಿತ್ತು. ಕಿಟಿಕಿ ಬದಿಯಲ್ಲಿ ಕುಳಿತಿದ್ದ ಗಾಣಿಗರು ಗಂಭೀರವಾಗಿ ಗಾಯಗೊಂಡಿದ್ದರು. ಕಿವಿಯ ತಮಟೆ ಒಡೆದು ಚೂರಾಗಿತ್ತು. ಸತತ 6 ದಿನ ಅವರು ನಿಶ್ಚಲನಾಗಿ ಕೋಮಾದಲ್ಲಿ ಮಲಗಿದ್ದರು.

ಅವರು ಹೊರಜಗತ್ತಿಗೆ ಸ್ಪಂದಿಸಿದ್ದು 13 ದಿನದ ಬಳಿಕ. ಕಳೆದ ಮೇ ತಿಂಗಳಿನಲ್ಲಿ ಕಿವಿಯ ನೋವು ಮತ್ತೆ ಉಲ್ಬಣಿಸಿ ಶಸ್ತ್ರಚಿಕಿತ್ಸೆ ನಡೆದಿತ್ತು.

ಕೈತಪ್ಪಿತ್ತು ಏಶ್ಯನ್‌
ಚಾಂಪಿಯನ್‌ಶಿಪ್‌
ಗಂಭೀರ ಗಾಯಗೊಂಡಿದ್ದ ವಿಶ್ವನಾಥ ಗಾಣಿಗರ ಅಂದಿನ ಸ್ಥಿತಿಗತಿಯನ್ನು ಕಂಡವರು ಅವರ ಕ್ರೀಡಾಬಾಳುವೆ ಮುಗಿಯಿತು ಎಂದೇ ಭಾವಿಸಿದ್ದರು. ನೂರಾರು ಕೆಜಿ ಭಾರ ಎತ್ತುವ ಕ್ರೀಡೆ ಪವರ್‌ಲಿಫ್ಟಿಂಗ್‌ ಕಠಿನ ಪರಿಶ್ರಮ, ತೀವ್ರ ಅಭ್ಯಾಸ, ದೇಹದಂಡನೆಯಿಂದ ಮಾತ್ರ ಯಶಸ್ಸು ಕೊಡುತ್ತದೆ. ಆದರೆ ಆ ಕ್ರೀಡೆಯಂತೆ ವಿಶ್ವನಾಥ್‌ ಕೂಡ ಕಠಿನ, ದೃಢ ಮನಸ್ಕರು. ತನ್ನ ಗುರಿಯಿಂದ ಇಂಚು ಕೂಡ ಹಿಂದೆ ಸರಿಯಲೇ ಇಲ್ಲ. ಗಾಯದಿಂದಾಗಿ ಕಳೆದ ವರ್ಷ ಏಶ್ಯನ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ ಪಂದ್ಯಾವಳಿಯನ್ನು ಕಳೆದು ಕೊಂಡಿದ್ದರೂ ಈಗ ಮತ್ತೂಂದು ಮೈಲಿಗಲ್ಲು ನೆಟ್ಟಿದ್ದಾರೆ.

ಬಡತನದಲ್ಲಿ ಅರಳಿದ ಪ್ರತಿಭೆ
ಬೆಂಗಳೂರಿನ ಜಿ.ಟಿ. ನೆಕ್ಸಸ್‌ ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿ ವಿಶ್ವನಾಥ ಗಾಣಿಗ ಕುಟುಂಬದ ಆಧಾರಸ್ತಂಭವೂ ಹೌದು. ತಂದೆ ಭಾಸ್ಕರ ಗಾಣಿಗ ಅಸೌಖ್ಯದಿಂದ ಮನೆ ಯಲ್ಲಿಯೇ ಇದ್ದಾರೆ. ವಿಶ್ವನಾಥ್‌ ಬಡತನದಿಂದಲೇ ಮೇಲೆ ಬಂದವರು.

ಕಣ್ಣೀರಾದ ತಾಯಿ
ವಿಶ್ವನಾಥ ಅವರ ತಾಯಿ ಪದ್ಮಾವತಿ ಅವರನ್ನು “ಉದಯವಾಣಿ’ ಮಾತ ನಾಡಿಸಿದಾಗ, ಮಗ ವಿಶ್ವ ಮಟ್ಟದಲ್ಲಿ ಸಾಧನೆಗೈದ ಹೆಮ್ಮೆಯಿದೆ. ತುಂಬಾ ಖುಷಿಯಾಗಿದೆ. ಇಷ್ಟು ವರ್ಷಗಳ ಅವನ ಪರಿಶ್ರಮದಿಂದಲೇ ಈ ಸಾಧನೆ ಸಾಧ್ಯವಾಗಿದೆ. ಚಿಕ್ಕವನಿರುವಾಗ ಗೇರು ಬೀಜ ಹೆಕ್ಕಿ ತುಂಬಾ ಕಷ್ಟಪಟ್ಟು ಶಾಲೆ ಓದಿದ್ದಾನೆ. ಕೆನಡಕ್ಕೆ ಹೋಗಲು ಕಷ್ಟಪಟ್ಟು ಹಣ ಹೊಂದಿಸಿದ್ದೆವು. ಅಪಘಾತದಲ್ಲಿ ಗಾಯಗೊಂಡಿದ್ದಾಗ ಅವನ ಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ. ತುಂಬಾ ನೋವು ಅನುಭವಿಸಿದ್ದಾನೆ. ಆ ನೋವನ್ನೆಲ್ಲ ಈ ಸಾಧನೆ ಮರೆಮಾಚಿದೆ ಎನ್ನುತ್ತಾ ಕಣ್ಣೀರಾದರು.

No Comments

Leave A Comment