Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಲಾಕರ್‌ ಕದ್ದು ಲಾಕಪ್‌ ಸೇರಿದ-ಅಸ್ಸಾಂ ಮೂಲದ ಯುವಕ

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಸೇರಿದ ಹಣದ ಲಾಕರ್‌ ಕದ್ದೊಯ್ದಿದ್ದ ಅಸ್ಸಾಂ ಮೂಲದ ಯುವಕ ಬಂಡೇಪಾಳ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮುಜಾಕೀರ್‌ ಹುಸೇನ್‌ ಅಲಿಯಾಸ್‌ ಬಾಬು (19) ಬಂಧಿತ. ಆರೋಪಿಯಿಂದ 12 ಲಕ್ಷ ರೂ. ಇದ್ದ ಲಾಕರ್‌ ವಶಕ್ಕೆ ಪಡೆಯಲಾಗಿದೆ. ಹುಸೇನ್‌ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಆತನ ಬೆರಳಚ್ಚು ಹಾಗೂ ಇತರೆ ದಾಖಲೆಗಳನ್ನು ಅಸ್ಸಾಂ ರಾಜ್ಯಕ್ಕೆ ಕಳುಹಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು ಎಂದು ಪೊಲೀಸರು ಹೇಳಿದರು. ಅಸ್ಸಾಂನ ಕರೀಂಗಂಜ್‌ ಜಿಲ್ಲೆಯ ಹುಸೇನ್‌ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ತನ್ನ ಬಾಲ್ಯ ಸ್ನೇಹಿತರ ಜತೆ ಬಂಡೇಪಾಳ್ಯದಲ್ಲಿ ವಾಸವಾಗಿದ್ದ. ಒಂದೂವರೆ ತಿಂಗಳ ಹಿಂದಷ್ಟೇ ಮುನೇಶ್ವರ ನಗರದ ನಿಂಜಾ ಕಾರ್ಟ್‌ ಪ್ರೈವೇಟ್‌ ಲಿಮಿಟೆಡ್‌ನ‌ಲ್ಲಿ ಆರೋಪಿಗೆ ಸ್ನೇಹಿತರೇ ಕೆಲಸ ಕೊಡಿಸಿದ್ದರು.

ಸಂಸ್ಥೆಯಲ್ಲಿ ನಿತ್ಯ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿತ್ತು. ಸಂಜೆ ವೇಳೆ ಸಿಎಂಎಸ್‌ ಸೆಕ್ಯೂರಿಟಿ ಕಂಪನಿಯವರು ಹಣ ತೆಗೆದುಕೊಂಡು ಹೋಗಿ ಸಂಸ್ಥೆಯ ಖಾತೆಗೆ ಜಮೆ ಮಾಡುತ್ತಿದ್ದರು. ಸೆ.2ರಂದು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸೆಕ್ಯೂರಿಟಿ ಸಂಸ್ಥೆ ಸಿಬ್ಬಂದಿ ಬಂದಿರಲಿಲ್ಲ. ಸೆ.3ರಂದು ಸಂಸ್ಥೆಯಲ್ಲಿ ಲಕ್ಷಾಂತ ರೂ. ವ್ಯವಹಾರ ನಡೆಸಿದ್ದು, ಆ ಹಣವನ್ನು ಸಂಸ್ಥೆಯ ಅಧಿಕಾರಿ ಲಾಕರ್‌ನಲ್ಲಿರಿಸಿ ಬೀಗ ಹಾಕಿಕೊಂಡು ಸಂಜೆ ಮನೆಗೆ ಹೋಗಿದ್ದರು.

 

ಸಹೋದ್ಯೋಗಿಗೆ ಬರದಂತೆ ಕರೆ ಮಾಡಿದ್ದ: ಸೆ.3ರಂದು ಮುಂಜಾನೆ ಪಾಳಿ ಕೆಲಸಕ್ಕೆ ಬಂದಿದ್ದ ಆರೋಪಿಯ ಶಿಫ್ಟ್ ಮಧ್ಯಾಹ್ನ 2 ಗಂಟೆಗೆ ಮುಗಿದಿತ್ತು. ಆದರೆ, ಹಣ ಕಳವು ಮಾಡಲು ಸಂಚು ರೂಪಿಸಿದ್ದ ಹುಸೇನ್‌, ಮಧ್ಯಾಹ್ನ ಪಾಳಿಗೆ ಬರುತ್ತಿದ್ದ ತನ್ನ ಸಹೋದ್ಯೋಗಿಗೆ ಕರೆ ಮಾಡಿ, ಪಾಳಿಯನ್ನು ತಾನೇ ಮುಂದುವರಿಸಲಿದ್ದು, ರಜೆ ಪಡೆಯುವಂತೆ ಸೂಚಿಸಿದ್ದ.

ರಾತ್ರಿ 8 ಗಂಟೆ ಸುಮಾರಿಗೆ ತನ್ನೊಂದಿಗೆ ಕೆಲಸ ಮಾಡತ್ತಿದ್ದ ನಾಲ್ವರು ಸಿಬ್ಬಂದಿಗೆ ಟೀ ಕುಡಿದು ಬರುವಂತೆ ಹೇಳಿದ್ದಾನೆ. ಆತನ ಮಾತು ನಂಬಿದ ನಾಲ್ವರು ಹೊರಗಡೆ ಹೋಗಿದ್ದಾರೆ. ಆ ವೇಳೆ ಆರೋಪಿ ಲಾಕರ್‌ ಒಡೆಯಲು ಯತ್ನಿಸಿದ್ದಾನೆ. ಆದರೆ, ಸಾಧ್ಯವಾಗಿಲ್ಲ. ಕೊನೆಗೆ ಕಬ್ಬಿಣ ರಾಡ್‌ನಿಂದ ಮೀಟಿ, ಲಾಕರನ್ನೇ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ಸ್ಮಶಾನದ ಬಳಿ ಇಟ್ಟಿದ್ದ: ಸಂಸ್ಥೆಯಿಂದ ಸುಮಾರು 300 ಮೀ. ದೂರ ಲಾಕರ್‌ ಅನ್ನು ಹೊತೊಯ್ದ ಆರೋಪಿ ಅದರ ಭಾರ ಹೊರಲು ಸಾಧ್ಯವಾಗದೆ ಮಾರ್ಗ ಮಧ್ಯೆ ಇರುವ ಸ್ಮಶಾನದ ಬಳಿ ಇರಿಸಿ, ಅದರ ಮೇಲೆ ಕಸದ ರಾಶಿ ಸುರಿದು ಪರಾರಿಯಾಗಿದ್ದ. ಹಣ ಕಳವು ಸಂಬಂಧ ಸಂಸ್ಥೆಯ ಹಿರಿಯ ಅಧಿಕಾರಿಗಳು ದೂರು ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೃತ್ಯ ನಡೆದ ಎರಡು ದಿನದಲ್ಲಿ ಆರೋಪಿಯನ್ನು ಬಂಧಿಸಿ, ಹಣ ವಶಕ್ಕೆ ಪಡೆದಿದ್ದಾರೆ ಎಂದು ಆಗ್ನೇಯ ವಿಭಾಗದ ಪೊಲೀಸರು ಹೇಳಿದರು.

ಟಿವಿ ಕಳ್ಳನ ಬಂಧನ: ಮತ್ತೊಂದು ಪ್ರಕರಣದಲ್ಲಿ ಮಾಲೀಕರ ಮನೆಯಲ್ಲಿದ್ದ ಹೊಸ ಟಿವಿಗಳನ್ನು ಶೋರೂಂಗೆ ಸಾಗಿಸುವ ಮಾರ್ಗ ಮಧ್ಯೆ ಕಳವು ಮಾಡಿ ಬೇರೆಯವರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ ಆರೋಪಿಯನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ. ದಾಸರಹಳ್ಳಿ ನಿವಾಸಿ ದೇವರಾಮ್‌ (22) ಬಂಧಿತ. ಆರೋಪಿಯಿಂದ 3.66 ಲಕ್ಷ ರೂ. ಮೌಲ್ಯದ 20 ಹೊಸ ಟಿವಿಗಳನ್ನು ಜಪ್ತಿ ಮಾಡಲಾಗಿದೆ. ಮತ್ತೂಬ್ಬ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಬಂಡೇಪಾಳ್ಯ ನಿವಾಸಿ ದುರ್ಗರಾಮ್‌ ಎಂಬವರು ಚಂದಾಪುರದಲ್ಲಿ ಹೊಸ ಟಿವಿ ಶೋರೂಂ ತೆರೆಯುವ ಸಲುವಾಗಿ ವಿವಿಧ ಮಾದರಿಯ ಟಿವಿಗಳನ್ನು ತಮ್ಮ ಮನೆಯ ಗೋಡೌನ್‌ನಲ್ಲಿ ಇರಿಸಿದ್ದರು. ನಾಲ್ಕೈದು ದಿನಗಳ ಹಿಂದೆ ಬಂಡೇಪಾಳ್ಯದ ಮನೆಯಿಂದ ಚಂದಾಪುರದ ಹೊಸ ಶೋರೂಂಗೆ ಟಿವಿಗಳನ್ನು ಸಾಗಿಸುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ.

ಸರಕು ಸಾಗಣೆ ವಾಹನದಲ್ಲಿ ಟಿವಿಗಳನ್ನು ಕೊಂಡೊಯ್ಯುವಾಗ ಆರೋಪಿಗಳು ಮಾರ್ಗ ಮಧ್ಯೆಯೇ 20 ಟಿವಿಗಳನ್ನು ಇಳಿಸಿ, ದಾಸರಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಇಟ್ಟಿದ್ದರು. ಬಳಿಕ ಗ್ರಾಹಕರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು. ಈ ಮಾಹಿತಿ ತಿಳಿದ ದುರ್ಗರಾಮ್‌ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಹಕರ ವೇಷದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೂಬ್ಬ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

No Comments

Leave A Comment