ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮುಖಭಂಗ; ಪಾಕ್ ಕಪ್ಪುಪಟ್ಟಿಗೆ ಸೇರ್ಪಡೆ! ವಾಷಿಂಗ್ಟನ್: ಭಯೋತ್ಪಾದನೆಗೆ ಹಣಕಾಸು ನೆರವು ನೀಡುವಂತೆ ತಡೆಯುವಲ್ಲಿ ವಿಫಲವಾಗಿರುವ ಪಾಕಿಸ್ತಾನಕ್ಕೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಹೊಡೆತ ಬಿದ್ದಿದ್ದು, ಇದೀಗ ಏಷಿಯಾ ಫೆಸಿಫಿಕ್ ಗ್ರೂಫ್ ಆಫ್ ದ ಫೈನಾಶ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್ ಎಟಿಎಫ್) ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪವನ್ನು ಪಾಕಿಸ್ತಾನ ಎದುರಿಸುತ್ತಿತ್ತು. ಆದರೆ ಪಾಕ್ ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವುದನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಏತನ್ಮಧ್ಯೆ ಪಾಕಿಸ್ತಾನ ಉಗ್ರರಿಗೆ ಹಣಕಾಸು ನೆರವು ನೀಡುವ ಮತ್ತು ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ಎಫ್ ಎಟಿಎಫ್ ನ ಮಾನದಂಡವನ್ನು ಉಲ್ಲಂಘಿಸಿದೆ. ಇದಕ್ಕಾಗಿ ನಿಗದಿಪಡಿಸಿದ್ದ 40 ಅಂಶಗಳ ಮಾನದಂಡಗಳಲ್ಲಿ 32ರಲ್ಲಿ ಪಾಕ್ ವಿಫಲವಾಗಿದ್ದರಿಂದ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ. ಕ್ಯಾನ್ ಬೆರ್ರಾದಲ್ಲಿ ನಡೆದ ಎಫ್ ಎಟಿಎಫ್ ನ ಎಪಿಜಿ ಸಭೆಯಲ್ಲಿ ಎರಡು ದಿನಗಳ ಕಾಲ ಸುಮಾರು 7ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಪಾಕಿಸ್ತಾನವನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸುವ ನಿರ್ಣಯ ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.