Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ರಾಜಧಾನಿಯೆಲ್ಲೆಡೆ ರಾಯರ ಆರಾಧನೆ

ಬೆಂಗಳೂರು: ರಾಜಧಾನಿಯ ವಿವಿಧೆಡೆ ಗುರುರಾಘವೇಂದ್ರ ಸ್ವಾಮಿಗಳ 348ನೇ ಆರಾಧನೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ನಗರದ ಎಲ್ಲಾ ರಾಯರ ಮಠಗಳು, ಟ್ರಸ್ಟ್‌ಗಳು, ದೇಗುಲಗಳಲ್ಲೂ ಶುಕ್ರವಾರ ಆರಾಧನೆಗೆ ಚಾಲನೆ ದೊರೆತಿದ್ದು, ಸಹಸ್ರಾರು ಮಂದಿ ಭಾಗವಹಿಸಿ ರಾಯರನ್ನು ಸ್ಮರಿಸಿದರು.

ದೇಗುಲ, ಮಠಗಳಲ್ಲಿ ರಾಯರ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ, ಪಾದಪೂಜೆ, ಕನಕಾಭಿಷೇಕ ನೆರವೇರಿತು. ಬಳಿಕ ಗಜವಾಹನೋತ್ಸವ, ರಥೋತ್ಸವ, ಪಲ್ಲಕ್ಕಿ ಉತ್ಸವ, ಪ್ರವಚನ, ಅನ್ನಸಂತರ್ಪಣೆ ಭಜನೆ, ದೇವರ ನಾಮ ಸ್ಮರಣೆ ನಡೆಯಿತು. ಸಂಜೆ ಬಳಿಕ ಎಲ್ಲೆಡೆ ಭರತನಾಟ್ಯ, ದಾಸವಾಣಿಯಂತಹ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಆರಾಧನೆಯಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ಎಂದಿದ್ದು, ಮುಂದಿನ ಮೂರು ದಿನಗಳು ಆರಾಧನಾ ಕಾರ್ಯಕ್ರಮಗಳು ಮುಂದುವರೆಯಲಿವೆ. ಹೀಗಾಗಿ, ದೇಗುಲ ಮಠಗಳಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

 

ಚಿಕ್ಕಪೇಟೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ ಕೈಗೊಂಡು ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಭಾನುವಾರ ಇಲ್ಲಿ ರಾಯರ ರಥೋತ್ಸವ ಜರುಗಲಿದೆ ಎಂದು ಮಠದ ಮೂಲಗಳು ತಿಳಿಸಿದ್ದಾರೆ.

ರಾಘವೇಂದ್ರ ಗುರು ಸಾರ್ವಭೌಮರ ಸಾಲಿಗ್ರಾಮ ಶಿಲೆಯ ಮೃತ್ತಿಕಾ ಬೃಂದಾವನ ವತಿಯಿಂದ ಆ. 16ರಿಂದ 18ರವರೆಗೆ “ಶ್ರೀ ರಾಘವೇಂದ್ರಸ್ವಾಮಿಗಳ 348ನೇ ಆರಾಧನಾ ಮಹೋತ್ಸವ’ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಅಭಿಷೇಕ, ಪಾದಪೂಜೆ, ಕನಕಾಭಿಷೇಕ, ಹೋಮ ಜರುಗಿದವು.

ಮಧ್ಯಾಹ್ನದ ಬಳಿಕ ಗುರು ಚಿಂತನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗವಾಯಿತು. ಸಂಜಯನಗರ 2ನೇ ಹಂತ ಶ್ರೀರಾಘವೇಂದ್ರ ಸೇವಾ ಸಮಿತಿಯಲ್ಲಿ ಬೆಳಗ್ಗೆ 8 ಗಂಟೆಗೆ ಪಂಚಾಮೃತ ಅಭಿಷೇಕ ಮತ್ತು ಸಾಮೂಹಿಕ ದೇವರ ಪಾರಾಯಣ, ಅಷ್ಟೋತ್ತರ ನಡೆಯಿತು.

ಜಯನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಧಾರ್ಮಿಕ ಆಚರಣೆಗಳು ನಡೆದವು. ಸಂಜೆ 7ಕ್ಕೆ ಶಂಕರ್‌ ಶಾನ್‌ಭೋಗ್‌ ಮತ್ತು ತಂಡದಿಂದ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಜಾಜಿನಗರದ ಶ್ರೀ ವ್ಯಾಸರಾಜ ಮಠದಲ್ಲಿ ನಡೆದ ಆರಾಧನಾ ಮಹೋತ್ಸವದಲ್ಲಿ ಅಭಿಷೇಕ, ಪಾರಾಯಣ, ಪಾದಪೂಜೆ, ಕನಕಾಭಿಷೇಕ, ವಿದ್ವಾಂಸರಿಂದ ಪ್ರವಚನ, ಅಲಂಕಾರ ಬ್ರಾಹ್ಮಣ ಸಮಾರಾಧನೆ, ಹಸ್ತೋದಕ, ಮಹಾಮಂಗಳಾರತಿ, ಪ್ರಾಕಾರೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ. ಸಂಜೆ ಭಜನೆ, ದಾಸವಾಣಿ, ಸಂಗೀತ ಕಾರ್ಯಕ್ರಮ ನಡೆದವು.

ಹೊಸಕೆರೆಹಳ್ಳಿ ಬಳಿಯ ಬನಶಂಕರಿ ಶ್ರೀ ಸರ್ವಜ್ಞ ಸೇವಾ ಬಳಗದ ವತಿಯಿಂದ ಪಂಚಾಮೃತ ಅಭಿಷೇಕ ಮತ್ತು ಕನಕಾಭಿಷೇಕ ಮಾಡಲಾಯಿತು. ಸಂಜೆ ಡಾ. ವಿ. ಸುಚೇತಾ ಅವರಿಂದ ದೇವರನಾಮಗಳು, ರವಿಕಿರಣ್‌ ಮತ್ತು ತಂಡದಿಂದ ಕೊಳಲು ವಾದನ ಕಾರ್ಯಕ್ರಮವಿತ್ತು.

ಶೇಷಾದ್ರಿಪುರಂನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 348ನೇ ಆರಾಧನಾ “ಪಂಚರಾತ್ರೋತ್ಸವ’ ನಿತ್ಯ ಮುಂಜಾನೆ ಧಾರ್ಮಿಕ ಆಚರಣೆಗಳು ಸಂಜೆ ವಿದುಷಿ ಡಾ. ಚಂದ್ರಿಕಾ ಪ್ರಹಲ್ಲಾದ್‌ ಮತ್ತು ತಂಡದಿಂದ ದಾಸಲಹರಿ ನಡೆಯಿತು.

No Comments

Leave A Comment