Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ಕೇರಳ,ಕರ್ನಾಟಕದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 83 ಸಾವು

ತಿರುವನಂತಪುರಂ/ಬೆಂಗಳೂರು:  ದಕ್ಷಿಣ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಕರ್ನಾಟಕ ಹಾಗೂ ಕೇರಳದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಒಟ್ಟಾರೇ 83 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ  ಮೃತರ ಸಂಖ್ಯೆ 57ಕ್ಕೆ ಏರಿಕೆ ಆಗಿದ್ದು, 1.65 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ಪ್ರವಾಹದಿಂದಾಗಿ ಈವರೆಗೂ 57 ಮಂದಿ ಮೃತಪಟ್ಟಿದ್ದಾರೆ. ಕೇರಳ ರಾಜ್ಯಾದಾದ್ಯಂತ 1,318 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಈ ಪರಿಹಾರ ಕೇಂದ್ರಗಳಲ್ಲಿ 46 ಸಾವಿರದ 400 ಕುಟುಂಬಗಳ 1 ಲಕ್ಷದ 65 ಸಾವಿರದ 519 ಮಂದಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಟ್ವೀಟ್ ಮಾಡಿದ್ದಾರೆ.

ಕಳೆದ ಮೂರು ದಿನಗಳಲ್ಲಿ 8 ಜಿಲ್ಲೆಗಳಲ್ಲಿ 80 ಭೂ ಕುಸಿತವಾಗಿದ್ದು, ಮಲ್ಲಾಪುರಂ ಜಿಲ್ಲೆಯಲ್ಲಿ 19, ಕೊಝಿಕೊಡ್ ನಲ್ಲಿ 14, ವಯನಾಡಿನಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ 198 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 2303 ಭಾಗಶ: ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ವಯನಾಡಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.  ಇಡುಕ್ಕಿ, ಪಾಲಕ್ಕಡು, ಮಲ್ಲಪುರಂ, ಮತ್ತಿತರ ಕಡೆಗಳಲ್ಲಿ ರೆಡ್ ಆಲರ್ಟ್ ಘೋಷಿಸಲಾಗಿದೆ.

ಕರ್ನಾಟಕದಲ್ಲಿ 26 ಮಂದಿ ಮಳೆ ಸಂಬಂಧಿತ ಅನಾಹುತಗಳಲ್ಲಿ ಮೃತಪಟ್ಟಿದ್ದಾರೆ. 45 ವರ್ಷಗಳಲ್ಲಿ ಅತಿ ಭೀಕರತೆ ಎನ್ನಬಹುದಾದ ಪ್ರವಾಹ ಸಂಭವಿಸಿದ್ದು, ಸುಮಾರು 6 ಸಾವಿರ ಕೋಟಿ ಮೌಲ್ಯದ ನಷ್ಟ ಉಂಟಾಗಿದೆ. ಕೇಂದ್ರ ಸರ್ಕಾರದಿಂದ 3 ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ಕೋರಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.26 ಮಂದಿ ಮೃತಪಟ್ಟಿದ್ದು, 2.35 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 44, 013 ಜಾನುವಾರುಗಳನ್ನು ರಕ್ಷಿಸಲಾಗಿದೆ. ಎನ್ ಡಿಆರ್ ಎಫ್, ಅರಸೇನಾ ಪಡೆ ಮತ್ತಿತರ ತಂಡಗಳಿಂದ ರಕ್ಷಣಾ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಈ ಮಧ್ಯೆ ಸಕಲೇಶಪುರದ ಮಾರನಹಳ್ಳಿ ಬಳಿ ಭೂ ಕುಸಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪಣಿ ಮಂಗಳೂರು ಗ್ರಾಮ ನೇತ್ರಾವತಿ ನದಿ ನೀರಿನಿಂದ ಆವೃತಗೊಂಡಿದ್ದು, ಬಂಟ್ವಾಳದಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

No Comments

Leave A Comment