Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಕಾರ್ಕಳದ ಹಳ್ಳಿ ಹುಡುಗಿ ನಾಸಿರಾ ಬಾನು ಈಗ ನ್ಯಾಯಾಧೀಶೆ!

ಉಡುಪಿ: ನ್ಯಾಯಾಧೀಶೆಯಾಗಿ ತನ್ನ ಗುರಿಯನ್ನು ಸಾಧಿಸಿದ ಮುಸ್ಲಿಂ ಸಮುದಾಯದ ಹೆಣ್ಣು ಮಗಳೊಬ್ಬಳ ಸಾಧನೆಯ ಕಥೆಯಿದು.

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬಜಗೋಳಿ ಸಮೀಪ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾಸಿರಾ ಬಾನು ಇತ್ತೀಚೆಗೆ ನ್ಯಾಯಾಧೀಶ ಹುದ್ದೆಗೆ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ನೇಮಕಾತಿ ಪತ್ರ ಕೈಗೆ ಸಿಗಲು ಕಾಯುತ್ತಿದ್ದಾರೆ.

 

ನಾಸಿರಾ ತಂದೆ ಅಲಿಯಬ್ಬ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದು ತಾಯಿ ನಬಿಸಾ ಗೃಹಿಣಿ.

ಇವರ ಕುಟುಂಬದಲ್ಲಿ ನ್ಯಾಯಾಧೀಶೆಯಾದ ಮೊದಲ ಮಹಿಳೆ ನಾಸಿರಾ. ನಾಸಿರಾ ಓದಿದ್ದು ತನ್ನೂರಿನ ಕನ್ನಡ ಮಾಧ್ಯಮ ಶಾಲೆಯಲ್ಲಿ. ಆಗ ತನ್ನ ಕನಸನ್ನು ಈಡೇರಿಸಲು ಗುರಿಯನ್ನು ಸಾಧಿಸಬೇಕೆಂದರೆ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಬೇಕೆಂದು ಮನದಟ್ಟು ಮಾಡಿಕೊಂಡಿದ್ದರು. ಸತತ ಪರಿಶ್ರಮದಿಂದ ತನ್ನ ಗುರಿ ತಲುಪಿದ್ದಾರೆ. ಇದಕ್ಕೆ ನಾಸಿರಾಗೆ ಆಕೆಯ ಪೋಷಕರ ಬೆಂಬಲ ಕೂಡ ಸಿಕ್ಕಿದೆ.

ಇಂದು ನಾಸಿರಾಳ ಸಾಧನೆ ಆಕೆಯ ಪೋಷಕರಲ್ಲಿ ತೀವ್ರ ಹರ್ಷವನ್ನುಂಟುಮಾಡಿದೆ. ಜೀವನವಿಡೀ ಕಷ್ಟದಲ್ಲಿ ಕಳೆದ ನಾವು ನಮ್ಮ ಮಕ್ಕಳು ಏನಾದರೊಂದು ಸಾಧಿಸಬೇಕೆಂದು ಕನಸು ಕಾಣುತ್ತಿದ್ದೆವು. ಅದನ್ನು  ಮಗಳು ನಾಸಿರಾ ಈಡೇರಿಸಿದ್ದಾಳೆ ಎನ್ನುತ್ತಾರೆ ಅಲಿಯಬ್ಬ.

ಅಲಿಯಬ್ಬ ಮತ್ತು ನೆಬಿಸಾ ದಂಪತಿಯ ಮತ್ತಿಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ, ಮಗ ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಸಿರಾ ಪಿಯುಸಿ ಮುಗಿಸಿದ್ದು ಬಜಗೋಳಿಯಲ್ಲಿ. ನಂತರ 2010ರಲ್ಲಿ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಪದವಿ ಕಾಲೇಜಿನಲ್ಲಿ ಎಲ್ಎಲ್ ಬಿ ಮುಗಿಸಿದರು.

ಶಿಕ್ಷಣ ಮುಗಿಸಿ ಕಾರ್ಕಳದಲ್ಲಿ ಅಡ್ವೊಕೇಟ್ ಕೆ ವಿಜೇಂದ್ರ ಕುಮಾರ್ ಬಳಿ ಕಾನೂನು ತರಬೇತಿ ಪಡೆಯುತ್ತಿದ್ದರು. 2015ರ ಬಳಿಕ ಕಾರ್ಕಳದಲ್ಲಿ ಅಡ್ವೊಕೇಟ್ ಜಿ ಮುರಳೀಧರ್ ಭಟ್ ಅವರ ಬಳಿ ಸಹಾಯಕರಾಗಿ ದುಡಿಯುತ್ತಿದ್ದಾರೆ.

ಕಾರ್ಕಳದ ಬಜಗೋಳಿಯ ನಲ್ಲೂರಿನ ಗ್ರಾಮದಲ್ಲಿ ಎಲ್ಲ ಮಕ್ಕಳಂತೆಯೇ ನಾನು ಚಿಕ್ಕವಳಿದ್ದಾಗ ಆಟ-ಪಾಠದಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ನನ್ನ ಗುರಿ ಮೇಲೆ ನನಗೆ ಯಾವಾಗಲೂ ಗಮನ ಇದ್ದಿತ್ತು ಎಂದು ಹೇಳುವ ನಾಸಿರಾ ಕಳೆದ ಜೂನ್ 13ರಂದು ನ್ಯಾಯಾಧೀಶ ಹುದ್ದೆಯ ಕೊನೆಯ ಸುತ್ತಿನ ಸಂದರ್ಶನ ಎದುರಿಸಿದ್ದರು.

No Comments

Leave A Comment