Log In
BREAKING NEWS >
ಮಂಗಳೂರು ಕಡಲ ತೀರದಲ್ಲಿ ಟೌಕ್ಟೇ ಚಂಡಮಾರುತ ಅಬ್ಬರಕ್ಕೆ ಸಿಲುಕಿದ್ದ 9 ಮಂದಿಯ ರಕ್ಷಣೆ: ನೌಕಾಪಡೆ ಸಿಬ್ಬಂದಿಗೆ ಮುಖ್ಯಮಂತ್ರಿ ಧನ್ಯವಾದ...

ಉತ್ತಮ ಮಳೆ ನಿರೀಕ್ಷೆಯೊಂದಿಗೆ ನಾಟಿ ಕಾರ್ಯ ಆರಂಭ

ಕುಂದಾಪುರ: ಮುಂಗಾರು ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಆರಂಭವಾಗಿದ್ದರೂ, ಮಳೆಯ ನಿರೀಕ್ಷೆಯಲ್ಲಿಯೇ ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದು, ಅವಿಭಜಿತ ಕುಂದಾಪುರ ತಾಲೂಕಿನೆಲ್ಲೆಡೆ ನಿಧಾನಕ್ಕೆ ನಾಟಿ ಕಾರ್ಯ ಆರಂಭಗೊಂಡಿದೆ.

ಜೂನ್‌ ಮೊದಲ ವಾರದಿಂದಲೇ ಆರಂಭವಾಗ ಬೇಕಿದ್ದ ಮಳೆ ಈ ಬಾರಿ ತಡವಾಗಿ ಶುರುವಾಗಿದ್ದು, ಭತ್ತದ ಕೃಷಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಆದರೂ, ಈಗ ಬಂದಿರುವ ಅಲ್ಪ- ಸ್ವಲ್ಪ ಮಳೆಯನ್ನೇ ನಂಬಿಕೊಂಡು, ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ರೈತರು ಗದ್ದೆಗಿಳಿದು ನೇಜಿ ನಾಟಿ ಕಾರ್ಯ ಆರಂಭಿಸಿದ್ದಾರೆ.

ಈಗಾಗಾಲೇ ತಾಲೂಕಿನಲ್ಲಿರುವ ವಂಡ್ಸೆ, ಬೈಂದೂರು, ಕುಂದಾಪುರದ 3 ರೈತ ಸೇವಾ ಕೇಂದ್ರಗಳಲ್ಲಿಯೂ ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಅಗತ್ಯದಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಇರಿಸಲಾಗಿದೆ.

ಎಂ.ಒ.- 4 ಬೀಜದ ಕೊರತೆಯಿಲ್ಲ

ಒಟ್ಟು 1,300 ಕ್ವಿಂಟಾಲ್ ಬೀಜ ಅಗತ್ಯವಿದ್ದು, ಆ ಪೈಕಿ ಈಗಾಗಲೇ ಈ ವರೆಗೆ 844 ಕ್ವಿಂಟಾಲ್ ಬೀಜ ಬಂದಿದೆ. ಅದರಲ್ಲಿ 780 ಕ್ವಿಂಟಾಲ್ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಹೆಚ್ಚುವರಿ ಬೇಕಾದರೂ ದಾಸ್ತಾನಿದೆ. ಈ ಬಾರಿ ಎಂ.ಒ.- 4 ಬೀಜದ ಕೊರತೆಯಿಲ್ಲ. ಅಗತ್ಯದಷ್ಟು ಬೀಜ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಬಾರಿಯಂತೆ ಎಂ.ಒ.-4 ಬೀಜ ಎಲ್ಲ ಕಡೆಗಳಲ್ಲೂ ಬೇಡಿಕೆ ಹೆಚ್ಚಾಗಿದ್ದು, ಸ್ವಲ್ಪ ಮಟ್ಟಿಗೆ ಕೊರತೆಯಾಗಿತ್ತು.

187 ಹೆಕ್ಟೇರ್‌ ಪೂರ್ಣ

ಈ ವರೆಗೆ ತಾಲೂಕಿನಲ್ಲಿ ಒಟ್ಟು 187 ಹೆಕ್ಟೇರ್‌ ನಾಟಿ ಕಾರ್ಯ ಪೂರ್ಣಗೊಂಡಿದೆ. ಇದರಲ್ಲಿ 87.2 ಹೆಕ್ಟೇರ್‌ ಕೂರಿಗೆ ಬಿತ್ತನೆ ಮೂಲಕ ಮಾಡಲಾಗಿದೆ. 50-60 ಹೆಕ್ಟೇರ್‌ ಯಾಂತ್ರೀಕೃತ ನಾಟಿ ಮಾಡಲಾಗಿದ್ದರೆ, ಬಾಕಿ ನೇರ ಬಿತ್ತನೆ ಮೂಲಕ ಮಾಡಲಾಗಿದೆ. ಕಳೆದ ಬಾರಿ ಕೂರಿಗೆ ಬಿತ್ತನೆ 8 ಹೆಕ್ಟೇರ್‌ ಹಾಗೂ ಡ್ರಮ್‌ ಸೀಡರ್‌ ಬಿತ್ತನೆ 63 ಹೆಕ್ಟೇರ್‌ ಪ್ರದೇಶಗಳಲ್ಲಿ ಮಾಡಲಾಗಿತ್ತು. ಇದಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸೀಡರ್‌ ಒಟ್ಟು 600 ಹೆಕ್ಟೇರ್‌ ಗುರಿ ಹೊಂದಲಾಗಿದೆ. ಕಳೆದ ಬಾರಿ 912 ಹೆಕ್ಟೇರ್‌ ಯಾಂತ್ರೀಕೃತ ಕೃಷಿಯಾಗಿದ್ದರೆ, ಈ ಬಾರಿ 2 ಸಾವಿರ ಹೆಕ್ಟೇರ್‌ ಯಾಂತ್ರೀಕೃತ ಕೃಷಿ ಮಾಡುವ ಗುರಿ ನಿಗದಿಪಡಿಸಲಾಗಿದೆ.

ಫಸಲಿನ ಮೇಲೆ ಪರಿಣಾಮ ಸಾಧ್ಯತೆ

ಇಷ್ಟು ಹೊತ್ತಿಗಾಗಲೇ ಉತ್ತಮ ಮಳೆ ಬರಬೇಕಿತ್ತು. ಈ ಬಾರಿ ತಡವಾಗಿ ಮಳೆ ಆರಂಭವಾಗಿರುವುದರಿಂದ ಬಿತ್ತನೆ, ನಾಟಿ ಕಾರ್ಯವು ವಿಳಂಬವಾಗಿದೆ. ಇದರಿಂದ ಈ ಮುಂಗಾರು ಹಂಗಾಮು ಮಾತ್ರವಲ್ಲದೆ ಮುಂದಿನ ಹಿಂಗಾರು ಹಂಗಾಮಿಗೂ ಪ್ರತಿಕೂಲ ಪರಿಣಾಮ ಬೀಳುವ ಸಾಧ್ಯತೆಯಿದೆ. ಇದಲ್ಲದೆ ನಾಟಿ ಕಾರ್ಯ ವಿಳಂಬವಾಗಿರುವುದರಿಂದ ಈ ಬಾರಿ ಫಸಲಿನ ಮೇಲೆಯೂ ಹೊಡೆತ ಬೀಳುವ ಸಂಭವವಿದೆ ಎನ್ನುವುದಾಗಿ ಬೀಜಾಡಿಯ ರಾಜು ಸೌರಭ್‌ ಮೊಗವೀರ ಅಭಿಪ್ರಾಯಪಡುತ್ತಾರೆ.
No Comments

Leave A Comment